ಕೇಂದ್ರದಿಂದ ಅಡಿಕೆ ಆಮದಿಗೆ ಕಠಿಣ ನಿಯಮ: ಸಂಸದೆ ಶೋಭಾ ಕರಂದ್ಲಾಜೆ

Update: 2018-07-28 18:01 GMT

ಚಿಕ್ಕಮಗಳೂರು, ಜು.28: ವಿದೇಶಿ ಅಡಿಕೆ ಆಮದಿಗೆ ಈಗಿರುವ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಮೂಲಕ ಕೇಂದ್ರ ಸರಕಾರ ರಾಜ್ಯದ ಅಡಿಕೆ ಬೆಳಗಾರರಿಗೆ ನೆಮ್ಮದಿ ತರುವಂತಹ ಕ್ರಮಕ್ಕೆ ಮುಂದಾಗಿದೆ ಎಂದು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ವಾಣಿಜ್ಯ ಇಲಾಖೆ ಕಿಲೋವೊಂದಕ್ಕೆ 251 ರೂ. ಕ್ಕಿಂತ ಕಡಿಮೆ ದರದ ಅಡಿಕೆ ಆಮದಿಗೆ ಸಂಪೂರ್ಣ ನಿಷೇಧ ಹೇರಿದೆ ಎಂದು ತಿಳಿಸಿದ್ದಾರೆ.

ಅಡಿಕೆಯು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿಯೂ ಅಡಿಕೆ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಬೆಳೆ ನಷ್ಟದಿಂದ ಕಂಗೆಟ್ಟಿರುವ ಸ್ಥಳೀಯ ಅಡಿಕೆ ಬೆಳೆಗಾರರು ಬೆಳೆದ ಅಡಿಕೆಗೆ ಕೇಂದ್ರ ಸರಕಾರದ ನಿರ್ಧಾರದಿಂದ ಬೇಡಿಕೆ ಹೆಚ್ಚಲಿದೆ. ಗುಣಮಟ್ಟದಲ್ಲೂ ಉತ್ತಮವಾಗಿರುವ ಸ್ಥಳೀಯ ಅಡಿಕೆಯ ಲಭ್ಯತೆಯಿಂದ ಗ್ರಾಹಕರಿಗೂ ಉತ್ತಮ ಗುಣಮಟ್ಟದ ಅಡಿಕೆ ದೊರೆಯಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯ ಪಟ್ಟಿದ್ದಾರೆ.

ತನ್ನ ಲೋಕಸಭಾ ಕ್ಷೇತ್ರದ ಇನ್ನೊಂದು ಪ್ರಮುಖ ಬೆಳೆಯಾದ ಕರಿಮಣಸಿನ ಆಮದಿಗೂ ಇದೇ ತೆರನಾದ ಕಠಿಣ ನಿಯಮವನ್ನು ಕೇಂದ್ರ ವಿಧಿಸಿದ್ದು, ರೂ.500ಕ್ಕಿಂತ ಕಡಿಮೆ ಬೆಲೆಯ ಕರಿಮಣಸಿನ ಆಮದಿಗೆ ಸಂಪೂರ್ಣ ನಿರ್ಬಂಧ ಹೇರಿದೆ. ಇದರಿಂದ ಕರಿಮೆಣಸಿನ ಬೆಳೆಗಾರರು ಕೂಡಾ ನಿಟ್ಟುಸಿರು ಬಿಡುವಂತಾಗಿದೆ ಎಂದು ಸಂಸದೆ ತಿಳಿಸಿದ್ದಾರೆ. ಕಳೆದ ಕೆಲವೇ ದಿನಗಳ ಹಿಂದೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಡಿಕೆ, ಕರಿಮೆಣಸು ಮತ್ತು ಕಾಫಿ ಬೆಳೆಗಾರರ ಪ್ರತಿನಿಧಿಗಳೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಅವರಿಗೆ ಬೆಳೆಗಾರರ ಸಂಕಷ್ಟಗಳನ್ನು ಮನವರಿಕೆ ಮಾಡಲಾಗಿತ್ತು.

ಬೆಳೆಗಾರರ ಸಂಕಷ್ಟ ಅರ್ಥ ಮಾಡಿಕೊಂಡ ಕೇಂದ್ರ ಸಚಿವರು ಇದೀಗ ವಿವಿಧ ವಾಣಿಜ್ಯ ಬೆಳೆಗಾರರನ್ನು ಪ್ರೋತ್ಸಾಹಿಸುವಂತಹಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವರ ಸಂಕಷ್ಟಗಳ ನಿವಾರಣೆಗೆ ಮುಂದಾಗಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News