ಬೀರೂರು: ಆಸ್ಪತ್ರೆಯ ಮುಂಭಾಗದ ಗೂಡಂಗಡಿಗಳ ತೆರವು

Update: 2018-07-28 18:08 GMT

ಬೀರೂರು, ಜು.28: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಇದ್ದ ಗೂಡಂಗಡಿಗಳಿಂದ ಆಸ್ಪತ್ರೆಗೆ ಸಮಸ್ಯೆಯಾಗುತ್ತಿದೆ ಮತ್ತು ಆಸ್ಪತ್ರೆಗೆ ಮರೆಯಾಗಿದ್ದರಿಂದ ಜಿಲ್ಲಾಧಿಕಾರಿ ಆದೇಶದಂತೆ ಶನಿವಾರ ಬೆಳಗ್ಗೆ ತೆರವುಗೊಳಿಸಲಾಯಿತು.

ಆಸ್ಪತ್ರೆಯ ಮುಂಭಾಗದಲ್ಲಿ ಅನಾವಶ್ಯಕವಾಗಿ ಪೆಟ್ಟಿಗೆಯ ಗೂಡಂಗಡಿಗಳನ್ನು ಇಟ್ಟು ಅದಕ್ಕೆ ಸರಿಯಾದ ಜಕಾತಿ ಹಣವನ್ನು ಸಂದಾಯ ಮಾಡದೇ ಇದ್ದ ಅಂಗಡಿ ಹಾಗೂ ವ್ಯವಹಾರವನ್ನು ನಡೆಸುತ್ತಿದ್ದ ಅಂಗಡಿಗಳನ್ನು ಸಹ ಪುರಸಭೆ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ತೆರವು ಮಾಡಿದರು.

ಆಸ್ಪತ್ರೆಯ ಮುಂಭಾಗದಲ್ಲಿ ಮತ್ತು ಲಿಂಗದಹಳ್ಳಿ ರಸ್ತೆಯ ಭಗೀರಥ ವೃತ್ತದ ಬಳಿಯಿಂದ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳಿದ್ದು, ಆಸ್ಪತ್ರೆ ಮುಂಭಾಗದ ಅಂಗಡಿಗಳಿಂದ ಆಸ್ಪತ್ರೆಯೇ ಮುಚ್ಚಿ ಹೋಗಿತ್ತು, ಅಂತಹವುಗಳನ್ನು ತೆರವು ಮಾಡುತ್ತಿರುವಾಗ ಕೆಲವು ಅಂಗಡಿ ಮಾಲಕರು ಅವರುಗಳೇ ತಮ್ಮ ಪೆಟ್ಟಿಗೆಗಳನ್ನು ತೆಗೆದುಕೊಂಡು ಹೋಗಿ ಪುರಸಭೆ ಆದೇಶಕ್ಕೆ ತಲೆ ಬಾಗಿದರು, ಇನ್ನೂ ಕೆಲವರು ಅಂಗಡಿ ತೆಗೆದರೆ ನಮ್ಮ ಜೀವನಕ್ಕೆ ಆಧಾರವಿಲ್ಲ ಎಂದು ತಕರಾರು ತೆಗೆದರು.

ಪುರಸಭೆ ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಬಸಣ್ಣ ಹಾಗೂ ಪೌರಕಾರ್ಮಿಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News