ಚಿಕ್ಕಮಗಳೂರು: ಖಾಸಗಿ ಆಸ್ಪತ್ರೆಗಳ ಮುಷ್ಕರಕ್ಕೆ ಉತ್ತಮ ಬೆಂಬಲ

Update: 2018-07-28 18:20 GMT

ಚಿಕ್ಕಮಗಳೂರು, ಜು.28: ನ್ಯಾಷನಲ್ ಮೆಡಿಕಲ್ ಕಮಿಷನ್ ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ನಿಲುವನ್ನು ಖಂಡಿಸಿ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆಯನ್ನು ಸ್ಥಗಿತಗೊಳಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ವೈದ್ಯಕೀಯ ಸಂಘ ಕರೆನೀಡಿದ್ದ ರಾಜ್ಯವ್ಯಾಪಿ ಮುಷ್ಕರವನ್ನು ಬೆಂಬಲಿಸಿ ನಗರದ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದವು. ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದರಿಂದ ನಗರದ ಮಲ್ಲೇಗೌಡ ಸರಕಾರಿ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚಿನ ಹೊರರೋಗಿಗಳು ಚಿಕಿತ್ಸೆ ಪಡೆದುಕೊಂಡರು. ಖಾಸಗಿ ಆಸ್ಪತ್ರೆಗಳ ಮುಷ್ಕರ ಅರಿತ ಸರಕಾರಿ ಆಸ್ಪತ್ರೆಯ ವೈದ್ಯರು ಗ್ರಾಮೀಣ ಭಾಗದ ನೂರಾರು ರೋಗಿಗಳಿಗೆ ಆಸ್ಪತ್ರೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು. ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 45ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಿ, ಹೊರ ರೋಗಿಗಳ ಚಿಕಿತ್ಸೆ ನಿಲ್ಲಿಸಲಾಗಿತ್ತು. ಆದರೆ ತುರ್ತು ಸೇವೆಗಳನ್ನು ಒದಗಿಸಲಾಗಿತ್ತು. ಮುಷ್ಕರಕ್ಕೆ ಜಿಲ್ಲಾದ್ಯಂತ ಸುಮಾರು 150ಕ್ಕೂ ಹೆಚ್ಚು ಕ್ಲಿನಿಕ್‍ಗಳು ಬೆಂಬಲ ಸೂಚಿಸಿ ಬಾಗಿಲು ಮುಚ್ಚಿದ್ದವು. ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದಾಗಿ ಜಿಲ್ಲೆಯಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಸಂಖ್ಯೆ ಶನಿವಾರ ಎಂದಿಗಿಂತ ಹೆಚ್ಚಿತ್ತು. ಜಿಲ್ಲೆಯಾದ್ಯಂತ ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಚಿಕ್ಕಮಗಳೂರು ನಗರದಲ್ಲಿ ಕೇಂದ್ರ ಸರಕಾರದ ನಿಲುವನ್ನು ವಿರೋಧಿಸಿ ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ವೈದ್ಯರಿಂದಲೇ ಎಲ್ಲಾ ರಾಜ್ಯಗಳಿಂದ ಆಯ್ಕೆ ಆಗುತ್ತಿದ್ದ ವೈದ್ಯ ಶಿಕ್ಷಣ ತಜ್ಞರ ಬದಲಿಗೆ ಶಿಕ್ಷಣ ಗುಣಮಟ್ಟ ನಿರ್ಧರಿಸಲು ಕೇಂದ್ರ ಸರಕಾರ ನಾಮ ನಿರ್ದೇಶನದ ಮೂಲಕ ಸದಸ್ಯರ ನೇಮಕ ಮಾಡಲು ಮುಂದಾಗಿದೆ. ಇದರಿಂದ ರಾಜ್ಯದ ಹಕ್ಕನ್ನು ಕಿತ್ತುಕೊಂಡತಾಗುತ್ತದೆ ಎಂದು ಆರೋಪಿಸಿದರು. 

ರಾಜ್ಯ ಸರಕಾರವೇ ಶೇ.80ರಷ್ಟು ವೈದ್ಯಕೀಯ ಸೀಟು ಮತ್ತು ಖಾಸಗಿ ಕಾಲೇಜುಗಳಿಗೆ ಶೇ.20 ರಷ್ಟು ಸೀಟುಗಳಿಗೆ ಶುಲ್ಕ ನಿಗದಿಪಡಿಸುತ್ತಿದ್ದವು. ಕೇಂದ್ರ  ಸರಕಾರ ಜಾರಿಗೆ ತರಲು ಮುಂದಾಗಿರುವ ಕಾಯ್ದೆ ಪ್ರಕಾರ ಶೇ.40 ರಷ್ಟು ಸೀಟುಗಳಿಗೆ ನ್ಯಾಷನಲ್ ಮೆಡಿಕಲ್ ಕಮಿಷನ್ ಮತ್ತು ಶೇ. 60ರಷ್ಟು ಸೀಟುಗಳಿಗೆ ಖಾಸಗಿ ಕಾಲೇಜುಗಳೇ ಶುಲ್ಕ ನಿಗದಿಪಡಿಸಿಕೊಳ್ಳಲಿವೆ. ಇದರಿಂದ ಬಡ ವಿದ್ಯಾರ್ಥಿಗಳ ವೈದ್ಯರಾಗುವುದು ಕನಸಿನ ಮಾತು ಎಂದು ತಿಳಿಸಿದರು.

ಈ ಸಂದರ್ಭ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಜಿ. ಶ್ರೀಧರ್, ಕಾರ್ಯದರ್ಶಿ ಡಾ.ಬಿ.ಕೆ. ಶಶಿಧರ್, ಡಾ.ಟಿ.ಹೆಚ್. ರಾಜು, ಡಾ.ಕೆ.ಜಿ. ಶ್ರೀನಿವಾಸ್, ಡಾ.ಎಲ್. ಪ್ರತೀಕ್,  ಡಾ.ಹೆಚ್. ಮಲ್ಲಿಕಾರ್ಜುನ್, ಡಾ. ಮೀರಾ,  ಡಾ.ಸುಮೀತಾ,  ಡಾ.ಸುಧಾ, ಡಾ. ವಿಜಯಕುಮಾರ್ ಭಾಗವಹಿಸಿದ್ದರು.

ಕಡೂರು: ವೈದ್ಯರಿಂದ ಪ್ರತಿಭಟನೆ
ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಗೆ ಮುಂದಾದ ಕೇಂದ್ರ ಸರಕಾರ ಕ್ರಮ ಖಂಡಿಸಿ ರಾಜ್ಯಾದ್ಯಂತ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಕಡೂರು ಘಟಕದ ಸದಸ್ಯರು ಶನಿವಾರ ದಿಕ್ಕಾರ ದಿವಸ್ ಆಚರಿಸಿ ಪ್ರತಿಭಟನೆ ನಡೆಸಿದರು.

ಕಡೂರು ತಾಲೂಕಿನ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಕ್ಲಿನಕ್‍ಗಳಲ್ಲಿನ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಡೂರು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ನಿರ್ಮಾಲ ರಮೇಶ್, ಕಾರ್ಯದರ್ಶಿ ಡಾ. ಬಸವಂತಪ್ಪ, ಡಾ. ಉಮೇಶ್‍ರಾವ್, ಡಾ. ಶಿವಕುಮಾರ್, ಡಾ. ರೂಪಶಿವಕುಮಾರ್, ಡಾ. ಛಾಯಪತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News