ವನ್ಯಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ: ನಟ ದರ್ಶನ್
ಮೈಸೂರು,ಜು.29; ವನ್ಯಜೀವಿಗಳ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಳು ಇದ್ದ ಬಗ್ಗೆ ನಾವೀಗ ಅಂತೆ ಕಂತೆಗಳನ್ನು ಕೇಳುತ್ತಿದ್ದೇವೆ ಎಂದು ನಟ ದರ್ಶನ್ ಬೇಸರ ವ್ಯಕ್ತಪಡಿಸಿದರು.
ವಿಶ್ವ ಹುಲಿ ದಿನಾಚರಣೆ ಹಿನ್ನಲೆಯಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ರವಿವಾರ ವಿಶ್ವ ಹುಲಿ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ದೀಪ ಬೆಳಗುವ ಮೂಲಕ ಮೃಗಾಲಯ ಯೂತ್ ಕ್ಲಬ್‍ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವನ್ಯ ಜೀವಿ ಸಂತತಿ ದಿನೇ ದಿನೇ ನಶಿಸುತ್ತಿದೆ. ಡೈನೋಸಾರ್ ಗಲು ಇದ್ದ ಬಗ್ಗೆ ನಾವೀಗ ಹಿರಿಯರಿಂದ ತಿಳಿದುಕೊಳ್ಳಬೇಕಿದೆ. ಮುಂದಿನ ಕನಿಷ್ಠ 50 ವರ್ಷಗಳಲ್ಲಿ ಹುಲಿ, ಸಿಂಹ ಇತ್ತಂತೆ ಎಂದು ಹೇಳುವ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಡು ಉಳಿಸಿದರೆ ನಾಡು ಸುರಕ್ಷಿತವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಬ್ಬಚ್ಚಿಗಳು ಕಾಣಿಸುತ್ತಿಲ್ಲ. ಅತಿಯಾದ ಮೊಬೈಲ್ ರೇಡಿಯೇಶನ್ ನಿಂದ ಹೀಗಾಗಿದೆ ಎಂದು ಅಭಿಪ್ರಾಯಿಸಿದ ನಟ ದರ್ಶನ್, ಮನೆಯಲ್ಲಿ ಪ್ರಾಣಿಗಳನ್ನು ಸಾಕಿದರೆ ಮಾತ್ರ ಪ್ರಾಣಿ ಪ್ರಿಯರಾಗುವುದಿಲ್ಲ. ಪ್ಲಾಸ್ಟಿಕ್ ಮುಕ್ತ ಮಾಡಿ ಪರಿಸರ ಉಳಿಸುವ ಮೂಲಕ ಪ್ರಾಣಿಪ್ರಿಯರಾಗಬೇಕು ಎಂದು ಕರೆ ನೀಡಿದರು.
ದರ್ಶನ್ ಹೇಳಿಕೆಯಿಂದ ಪ್ರಭಾವಿತರಾದ ಅಭಿಮಾನಿ ಪರಿಸರ ಪ್ರೇಮಿ ಬನ್ನೂರು ಪಟ್ಟಣದ ನಿವಾಸಿ ಮಹೇಂದ್ರ ಸಿಂಗ್ ಸ್ಥಳದಲ್ಲೇ ಒಂದು ಲಕ್ಷ ದೇಣಿಗೆ ನೀಡಿ ಹುಲಿಯನ್ನು ದತ್ತು ತೆಗೆದುಕೊಂಡರು.
ಕಾರ್ಯನಿರ್ವಹಣಾಧಿಕಾರಿ ರವಿಶಂಕರ್, ಅಧಿಕಾರಿಗಳಾದ ಬಸವರಾಜು, ಸುರೇಶ್, ಸೋಮಸುಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.