‘ಪ್ರತ್ಯೇಕ ರಾಜ್ಯದ ಹೋರಾಟ’ಕ್ಕೆ ಬೆಂಬಲ ನೀಡುವುದು ಅನಿವಾರ್ಯ: ಬಿಜೆಪಿ ಶಾಸಕ ನೆಹರೂ ಓಲೇಕಾರ್

Update: 2018-07-29 14:34 GMT

ಬೆಂಗಳೂರು, ಜು. 29: ‘ಪ್ರತ್ಯೇಕ ರಾಜ್ಯ’ದ ಕೂಗಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದು ಬಿಜೆಪಿ ಕೋರ್ ಕಮಿಟಿ ನಿನ್ನೆಯಷ್ಟೇ ನಿರ್ಣಯ ಕೈಗೊಂಡಿದೆ. ಆದರೆ, ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡುತ್ತೇವೆಂದು ಹೇಳಿರುವುದು ಬಿಜೆಪಿಯವರ ಆಕ್ರೋಶಕ್ಕೆ ಕಾರಣವಾಗಿದೆ.

ರವಿವಾರ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಾಸಕ ನೆಹರೂ ಓಲೆಕಾರ್, ಸಿಎಂ ಕುಮಾರಸ್ವಾಮಿ ತಾರಮತ್ಯ ನೀತಿ ಅನುಸರಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಕೂಗಿಗೆ ಎಚ್‌ಡಿಕೆ ಧೋರಣೆಯೇ ಮೂಲ ಕಾರಣ. ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಹಾವೇರಿ ಜಿಲ್ಲೆಗೆ ಮಂಜೂರು ಮಾಡಿದ್ದ ವೈದ್ಯಕೀಯ ಕಾಲೇಜಿನ ಬಗ್ಗೆ ಹಿಂದಿನ ಸಿದ್ದರಾಮಯ್ಯ ಮತ್ತು ಈಗಿನ ಕುಮಾರಸ್ವಾಮಿ ಸರಕಾರ ಸ್ಪಂದಿಸಿಲ್ಲ. ಹೀಗಾಗಿ ಉತ್ತರ ಕರ್ನಾಟಕದ ಕಡೆಗಣನೆ ಸ್ಪಷ್ಟ. ಹೀಗಾಗಿ ಈ ಭಾಗದ ಜನತೆ ಕೆರಳಿದ್ದಾರೆ ಎಂದು ಓಲೆಕಾರ್ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ತಾರತಮ್ಯ ಧೋರಣೆ ಹೀಗೆ ಮುಂದುವರಿಸಿದೆ ಆ.2ಕ್ಕೆ ಕರೆ ನೀಡಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ನೀಡುವುದು ಅನಿವಾರ್ಯ ಎಂದ ಅವರು, ಹಾವೇರಿ ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರಕಾರ ಸ್ಪಂದಿಸಬೇಕು ಎಂದು ಕೋರಿದರು.

ವೈಯಕ್ತಿಕ ರಾಜಕಾರಣ ಸಲ್ಲ: ಉತ್ತರ ಕರ್ನಾಟಕಕ್ಕೆ ನಿಜವಾಗಿಯೂ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸಲು ಕ್ರಮ ವಹಿಸಬೇಕು. ಅದು ಬಿಟ್ಟು ತಮ್ಮ ವೈಯಕ್ತಿಕ ರಾಜಕೀಯಕ್ಕಾಗಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವುದು ಅಕ್ಷಮ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪಿಸಿದ್ದಾರೆ.

ರಾಜಕೀಯ ವಿಚಾರಗಳಲ್ಲಿ ಸ್ವಾಮೀಜಿಗಳು ಭಾಗಿಯಾಗಬಾರದು. ಪ್ರತ್ಯೇಕ ರಾಜ್ಯದ ವಿಚಾರದಲ್ಲಿ ಕೆಲ ಸ್ವಾಮಿಗಳು ಮೂಗು ತೂರಿಸುತ್ತಿದ್ದಾರೆ. ಸ್ವಾಮೀಜಿಗಳಿಗೆ ಏಕೆ ಬೇಕು ರಾಜಕೀಯವೆಂದು ಪ್ರಶ್ನಿಸಿದ ಅವರು, ಉ.ಕ.ಪ್ರತ್ಯೇಕ ರಾಜ್ಯಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಅಖಂಡ ಕರ್ನಾಟಕ ನಮ್ಮ ಧ್ಯೇಯ ಆಗಬೇಕು ಎಂದರು.

ಅಖಂಡ ಕರ್ನಾಟಕದ ಅರಿವಿಲ್ಲದೆ ಇರುವವರು ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸುತ್ತಿದ್ದು, ಅವರೆಲ್ಲರೂ ಸ್ವಾರ್ಥಿಗಳು. ಕರ್ನಾಟಕ ಏಕೀಕರಣ ಹಾಗೂ ಭಾಷಾವಾರು ಪ್ರಾಂತ್ಯಗಳೇಕೆ ಆದವು ಎಂಬುದು ಅವರಿಗೆ ಮಾಹಿತಿ ಇಲ್ಲದೆ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ನಾನೂ ಉತ್ತರ ಕರ್ನಾಟಕದ ಶಾಸಕನೇ, ಉ.ಕ.ಅಭಿವೃದ್ಧಿಯ ವಿಚಾರವನ್ನು ನಾನು ಒಪ್ಪುತ್ತೇನೆ’

-ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News