ಕಾಫಿ, ಕಾಳುಮೆಣಸು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸಚಿವರಿಗೆ ಮನವಿ

Update: 2018-07-29 15:30 GMT

ಚಿಕ್ಕಮಗಳೂರು, ಜು.29: ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಬ್ಲಾಕ್ ಗೋಲ್ಡ್  ಲೀಗ್  ತಂಡ ಹಾಗೂ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಅವರು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹಾಗೂ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯ ಪ್ರತಾಪಸಿಂಹ ಮತ್ತು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿಯವರ ನೇತೃತ್ವದ ನಿಯೋಗವು ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಳೆಗಾರರ ಪರವಾಗಿ ಅಹವಾಲುಗಳನ್ನು ಸಲ್ಲಿಸಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಜೈರಾಂ ಹಾಗೂ ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಡೂರು ಶಾಸಕ ಬೆಳ್ಳಿಪ್ರಕಾಶ್, ತರಿಕೆರೆ ಶಾಸಕ ದೊರೆನಾಳು ಸುರೇಶ್, ಕೆ.ಜಿ.ಎಫ್ ಅಧ್ಯಕ್ಷ ಬಿ.ಎಸ್.ಜೈರಾಂ, ಕೆ.ಪಿ.ಎ ಅಧ್ಯಕ್ಷ ಪ್ರಮೋದ್, ಬಿ.ಜಿ.ಎಲ್.ನ ಅಧ್ಯಕ್ಷ ಕೆ.ಆರ್.ಕೇಶವ, ಕನ್ಸಾರ್ಟಿಯಮ್ ಆಫ್ ಬ್ಲಾಕ್ ಪೆಪ್ಪರ್ ಸಂಸ್ಥೆಯ ಪ್ರದೀಪ್ ಪೂವಯ್ಯ, ಕೆ.ಕೆ.ವಿಶ್ವನಾಥ್, ಉಪಾಸಿಯ ಅಧ್ಯಕ್ಷ ಶಿರೀಸ್ ವಿಜೇಂದ್ರ, ಕಾಫಿ ಮಂಡಳಿ ಸದಸ್ಯ ಎನ್.ಬಿ.ಉದಯ್ ಕುಮಾರ್, ಮೂಡಿಗೆರೆ ಬ್ಲಾಕ್ ಬಿಜೆಪಿ ಅಧ್ಯಕ್ಷ ಪ್ರಮೋದ್, ಕೋಮಾರ್ಕ್ ಅಧ್ಯಕ್ಷ ಎ.ಎ ಶಿವ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಲೆಕಾರ್ಟಿ ಶಿವು, ಮೋಹನ್ ಆಳ್ವಾರೀಸ್, ಶಿರೀಸ್ ತಮ್ಮಗಳೆ, ಡಾ.ವಿವೇಕ್ ಹಾಗೂ ಇತರ ಬಿ.ಜೆ.ಪಿ ಮುಖಂಡರನ್ನೊಳಗೊಂಡ ನಿಯೋಗವು ಕೇಂದ್ರ ಸಚಿವರಾದ ಸದಾನಂದಗೌಡ, ಸುರೇಶ್‍ಪ್ರಭು, ಅನಂತಕುಮಾರ್, ಪಿಯಾಸ್ ಗೋಯಲ್,  ರಾದಾಮೋಹನ್ ಸಿಂಗ್,  ಹರ್ಷವರ್ಧನ್, ಹಾಗೂ ಕೇಂದ್ರ ರಾಜ್ಯ ಖಾತೆಯ ಸಚಿವ ಶಿಕಾವತ್, ಹಾಗೂ ಪಾರ್ಲಿಮೆಂಟ್ರಿ ಸ್ಟಾಂಡಿಂಗ್ ಕಮಿಟಿಯ ವೀರಪ್ಪ ಮೋಯ್ಲಿಯರನ್ನು ಭೇಟಿ ಮಾಡಿ, ಕಾಫಿ, ಕಾಳುಮೆಣಸು ಬೆಲೆ ಕುಸಿತ, ತೀವ್ರ ಅತೀವೃಷ್ಟಿಯಿಂದ ಕಾಫಿ ಮತ್ತು ಕಾಳುಮೆಣಸು ಬೆಳೆಗಳಿಗೆ ಹಾನಿಯಾಗಿರುವುದರ ಬಗ್ಗೆ, ಕಾಡು ಪ್ರಾಣಿಗಳ ಹಾವಳಿ ಮತ್ತು ಬೆಳೆಹಾನಿ ಕುರಿತು ಪೂರಕ ಮಾಹಿತಿಗಳೊಂದಿಗೆ ಸಂಕ್ಷಿಪ್ತವಾಗಿ ಮನವರಿಕೆ ಮಾಡಿಕೊಡಲಾಗಿದ್ದು, ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರದ ಆಮದು ನೀತಿಯಿಂದಾಗಿ ಪ್ರಸಕ್ತ ಕಾಫಿ, ಕಾಳು ಮೆಣಸು ಬೆಳೆಗಾರರು ಸಂಕಷ್ಟದಲ್ಲಿದ್ದು, ಬ್ಯಾಂಕುಗಳ ಸಾಲದ ವಸೂಲಾತಿಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿರುವ ಅವರು, ರೈತಬೆಳೆಗಾರರ ಜೂನ್ 2018 ರವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ, ಅಸಲನ್ನು 9 ಕಂತುಗಳ ಮೂಲಕ ಪಾವತಿಸಲು ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ ಹಾಗೂ ಮುಂದಿನ ಕೃಷಿ ಚಟುವಟಿಕೆಗಳಿಗಾಗಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಸ್ಥೆಗಳಲ್ಲಿ 25 ಲಕ್ಷದವರೆಗೆ ಶೇ.3ರ ಬಡ್ಡಿದರದಲ್ಲಿ ಹಾಗೂ 25 ಲಕ್ಷಕ್ಕೆ ಮೇಲ್ಪಟ್ಟು ಶೇ.6ರ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸಿಕೊಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ದೇಶೀಯ ಕಾಳುಮೆಣಸಿಗೆ ಬೆಂಬಲ ಬೆಲೆ ನೀಡಿ, ವಿದೇಶಿ ಕಾಳುಮೆಣಸು ಆಮದನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಲೆನಾಡಿನಲ್ಲಿ ಕಾಡಾನೆ ಹಾವಳಿ ಅಧಿಕಗೊಂಡಿದ್ದು, ದಿನನಿತ್ಯ ಪ್ರಾಣ ಮತ್ತು ಬೆಳೆಹಾನಿಯಾಗುತ್ತಿರುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವ ಸಲುವಾಗಿ ರೈಲ್ವೆ ಕಂಬಿಗಳ ತಡೆಗೋಡೆಗಳನ್ನು ನಿರ್ಮಿಸಿ, ಪರಿಹಾರ ಒದಗಿಸಲು ಶೀಘ್ರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News