ದೇಶದ ಪ್ರತೀ ವ್ಯಕ್ತಿಯ ಕಲ್ಯಾಣಕ್ಕಾಗಿ ದುಡಿಯಲು ಕಾರ್ಯಕರ್ತರು ಸಿದ್ಧರಾಗಬೇಕು: ಬಿಜೆಪಿ ನಾಯಕಿ ವಿಜಯ ರಾಹತ್ಕರ್

Update: 2018-07-29 17:07 GMT

ದಾವಣಗೆರೆ,ಜು.29: ದೇಶದ ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣಕ್ಕಾಗಿ ಹಗಲು-ರಾತ್ರಿ ದುಡಿಯಲು ನಮ್ಮ ಪಕ್ಷದ ಕಾರ್ಯಕರ್ತರು ಸಿದ್ದರಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿಜಯ ರಾಹತ್ಕರ್ ಸಲಹೆ ನೀಡಿದರು.  

ನಗರದ ಜಿಎಂಐಟಿ ಕಾಲೇಜಿನಲ್ಲಿ ಭಾನುವಾರ ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾದ ಪ್ರಶಿಕ್ಷಣ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ಪಕ್ಷದ ವಿಚಾರಧಾರೆ ತಿಳಿಯಲು ನಮ್ಮ ಜ್ಞಾನ ಹಾಗೂ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಇಂಥಹ ಪ್ರಶಿಕ್ಷಣ ಶಿಬಿರಗಳು ಅತ್ಯವಶ್ಯವಾಗಿವೆ ಎಂದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ನಾಡಿನ ಜನತೆ ಬಿಜೆಪಿಯ ಮೇಲೆ ಅತ್ಯಂತ ವಿಶ್ವಾಸವಿಟ್ಟು, ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಆದರೆ, ಕೆಲವೇ ಸ್ಥಾನಗಳ ಕೊರತೆಯಿಂದ ಅಧಿಕಾರದಿಂದ ದೂರ ಉಳಿಯಬೇಕಾಯಿತು ಎಂದರು. 

ಕರ್ನಾಟಕದ ಬಿಜೆಪಿಯ ರಾಜ್ಯ ಸಹ ಉಸ್ತುವಾರಿ ಪುರಂದರೇಶ್ವರಿ ಮಾತನಾಡಿ, ದೇಶದಲ್ಲಿ 1700 ರಾಜಕೀಯ ಪಕ್ಷಗಳಿವೆ. ಈ ಪೈಕಿ ಎಲ್ಲಾ ಪಕ್ಷಗಳಿಂದಲೂ ನಮ್ಮ ಪಕ್ಷ ವಿಭಿನ್ನವಾಗಿದೆ. ಅತ್ಯಂತ ತಳ ಸಮುದಾಯದಲ್ಲಿ ವ್ಯಕ್ತಿಯನ್ನು ದೇಶದ ಪ್ರಥಮ ಪ್ರಜೆಯನ್ನಾಗಿಸಿದ ಕೀರ್ತಿ ನಮ್ಮ ಪಕ್ಷಕ್ಕಿದೆ.  ಬೇರೆ ಪಕ್ಷಗಳಲ್ಲಿ ಗಾಡ್‍ಫಾದರ್ ಇಲ್ಲದಿದ್ದರೆ, ಏನಾಗಲೂ ಸಾಧ್ಯವಿಲ್ಲ. ಇದೇ ಬಿಜೆಪಿ ಮತ್ತು ಇತರೆ ಪಕ್ಷಗಳಿಗಿರುವ ವ್ಯತ್ಯಾಸ ಎಂದು ವಿಶ್ಲೇಷಿಸಿದರು. 
2019ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಆ ಜವಾಬ್ದಾರಿಯನ್ನು ಅರಿತು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮಹಿಳಾ ಕಾರ್ಯಕರ್ತೆಯರು ಶ್ರಮಿಸಿದರೆ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಬಿಲ್ ಅನ್ನು ಪಾಸ್ ಮಾಡಿಸಿಯೇ ತೀರುತ್ತೇವೆ ಎಂದರು. 

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ವಂಶ ಆಡಳಿತ ನಿಲ್ಲಬೇಕಾದರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲೇಬೇಕಾಗಿದೆ. ಪ್ರಧಾನಿ ಹುದ್ದೆಯ ಜೊತೆಗೆ ರಾಹುಲ್‍ ಗಾಂಧಿ, ಮಾಯಾವತಿ, ಮಮತಾ ಬ್ಯಾನರ್ಜಿ ಅವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೋದಿ ಅವರಿಗೆ ಪ್ರತಿಸ್ಪರ್ಧಿಗಳೇ ಇಲ್ಲ. ಹೀಗಾಗಿ ಬಿಜೆಪಿ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಸ್.ಎ.ರವೀಂದ್ರನಾಥ್, ಚಿತ್ರ ನಟಿ ಶೃತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಶಾಸಕಿ ರೂಪಾಲಿ ನಾಯ್ಕ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಜಯಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News