ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸಲು ದೇವೇಗೌಡ ಹುನ್ನಾರ: ಯಡಿಯೂರಪ್ಪ ಆರೋಪ
ಬೆಂಗಳೂರು, ಜು. 30: ‘ಮಾಜಿ ಪ್ರಧಾನಿ ದೇವೇಗೌಡ ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರ ನಡೆಸಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಕರ್ನಾಟಕ ಇಬ್ಭಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಖಂಡ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಹಿರಿಯರು ರಕ್ತ ಹರಿಸಿದ್ದಾರೆ. ಆದರೆ, ಸಿಎಂ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತರ ನಡೆಸಿರುವಂತೆ ಕಾಣುತ್ತಿದೆ ಎಂದು ದೂರಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ನಾಳೆ(ಜು.31) ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಭಾಗವಹಿಸಲಿರುವ ಮಠಾಧೀಶರು, ಹೋರಾಟಗಾರರ ಮನವೊಲಿಸಲು ತಾನು ಬೆಳಗಾವಿಗೆ ತೆರಳುತ್ತಿದ್ದು, ಏಕೀಕೃತ ಕರ್ನಾಟಕದ ಹೋರಾಟಕ್ಕೆ ಬದ್ಧವಾಗಿರಲು ಮನವಿ ಮಾಡುವೆ ಎಂದು ಬಿಎಸ್‌ವೈ ಹೇಳಿದರು.
ಉ.ಕ. ಭಾಗದ ಜನರನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿ, ಸಾಲಮನ್ನಾ ಮಾಡಲು ನೀವೇನು ನನಗೆ ಓಟು ಹಾಕಿದ್ದೀರಾ? ಓಟು ಹಾಕುವಾಗ ನನ್ನ ನೆನಪಾಗಲಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಮುಖ್ಯಮಂತ್ರಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎನ್ನುವ ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಮನೆ ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ಮುಖಂಡರು ಮೌನಕ್ಕೆ ಶರಣಾಗಿರುವುದು ಅನುಮಾನ ಸೃಷ್ಟಿಸಿದೆ. ಕುಮಾರಸ್ವಾಮಿ ಹೇಳಿಕೆಗಳಿಂದ ಉತ್ತರ ಕರ್ನಾಟಕದ ಜನತೆಗೆ ನೋವಾಗಿದೆ. ಇವರ ಹೇಳಿಕೆಗಳ ಲಾಭವನ್ನು ಪಡೆಯಲು ಹಲವರು ಪ್ರಯತ್ನಿಸುತ್ತಿದ್ದು, ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಬಾಗವಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.