ಮೋದಿ ಮುಕ್ತ ಭಾರತದಿಂದ ಮಾತ್ರ ದೇಶಕ್ಕೆ ಭವಿಷ್ಯ: ಪ್ರೊ.ಮಹೇಶ್ ಚಂದ್ರಗುರು

Update: 2018-07-30 14:46 GMT

ಮೈಸೂರು,ಜು.30: ಮೋದಿ ಮುಕ್ತ ಭಾರತ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯ. ಹಾಗಾಗಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಕರೆ ನೀಡಿದರು.

ಮಾನಸಗಂಗೋತ್ರಿಯ ರಾಣಿಬಹದ್ದೂರು ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ದಿ.ರಾಕೇಶ್ ಸಿದ್ದರಾಮಯ್ಯ ರವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ 'ಸಾಮಾಜಿಕ ನ್ಯಾಯದ ಸೋಲು-ಗೆಲುವುಗಳು' ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಲೂಟಿಹೊಡೆಯುತ್ತಿದ್ದು, ದಿನಕ್ಕೊಂದು ದೇಶಕ್ಕೆ ಹೋಗಿ ಬಿಕ್ಷೆ ಬೇಡುತ್ತಿದ್ದಾರೆ. ಕೈಗಾರಿಕೆ ಸ್ಥಾಪಿಸಿ ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆದು, ನನಗಿಷ್ಟು ಕೊಡಿ ಎಂದು ಕೇಳುತ್ತಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕೇ ? ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮೋದಿ ಮುಕ್ತ ಭಾರತ ಮಾಡಬಹುದು ಎಂದು ಹೇಳಿದರು.

ಮೋದಿ, ಅಮಿತ್ ಶಾ, ಶ್ರೀರಾಮ ಸೇನೆ ಮತ್ತು ಸಂಘಪರಿವಾರವು ಹಿಂದುಳಿದವರು ದಲಿತರನ್ನು ಗುಲಾಮಗಿರಿಗೆ ದೂಡಲು ಯತ್ನಿಸುತ್ತಿವೆ. ಅಂತಹ ಸಂಘಟನೆ ಮತ್ತು ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸಿ ಎಂದು ಹೇಳಿದರು.

ಬ್ರಾಹ್ಮಣರಿಂದ ಹಿಡಿದು ಆದಿವಾಸಿಗಳವರೆಗೂ ಜಾತಿ ಆಧಾರದ ಮೇಲೆ ಮೀಸಲಾತಿ ಜಾರಿಯಾದರೆ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ದೇಶದ ಹಲವಾರು ಉನ್ನತ ಹುದ್ದೆಗಳು ಮೇಲ್ವರ್ಗದವರ ಹಿಡಿತದಲ್ಲಿದ್ದು, ನ್ಯಾಯಾಂಗ, ವಿ.ವಿಗಳು ರಾಜಕೀಯ ಮತ್ತು ಆಡಳಿತದ ಹಲವಾರು ಉನ್ನತ ಸ್ಥಾನಗಳನ್ನು ಬ್ರಾಹ್ಮಣ ವೈದಿಕರೇ ಅನುಭವಿಸುತ್ತಿದ್ದಾರೆ. ಶೇ.3 ಇರುವ ಬ್ರಾಹ್ಮಣರು ನ್ಯಾಯಾಂಗ ವ್ಯವಸ್ಥೆಯಲ್ಲಿ ಶೇ.90 ಸ್ಥಾನವನ್ನು ಅಲಂಕರಿಸಿದ್ದಾರೆ. ಹೀಗಿದ್ದರೆ ಹೇಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಹೇಗೆ ಸಿಗುತ್ತದೆ ? ಬ್ರಾಹ್ಮಣರು ವೈದಿಕರೇ ಹೆಚ್ಚು ಇರುವುದರಿಂದ ದೇಶ ಹಿಂದುಳಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಲವಾರು ವರ್ಷಗಳಿಂದ ದೇಶ ಬ್ರಾಹ್ಮಣ ಮತ್ತು ವೈದಿಕ ಶಾಹಿಗಳ ಕಪಿಮುಷ್ಟಿಯಲ್ಲಿದ್ದು, ಅದನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಬ್ರಾಹ್ಮಣ ಶಾಹಿಯನ್ನು ದೂರ ಹಾಕಿ ಭಾರತ ದೇಶವನ್ನು ಉಳಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದ್ದು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಜಾಗೃತರಾಗಬೇಕು ಎಂದು ಹೇಳಿದರು.

ಹಿಂದುಳಿದ ಜನಾಂಗದವರಿಗೆ ಅಜ್ಞಾನ, ಸಂಘಟನೆ, ಪ್ರಬುದ್ಧತೆ, ಹೃದಯವಂತಿಕೆ ಮತ್ತು ಸಾಮಾಜಿಕ ಜಾಗೃತಿಯ ಕೊರತೆಯೇ ಹಿಂದುಳಿಯಲು ಕಾರಣ. ಸಾಮಾಜಿಕ ಕಳಕಳಿ ಇದ್ದರೂ ಅದನ್ನು ಅರ್ಥಮಾಡಿಸುವವರ ಸಂಖ್ಯೆ ಕಡಿಮೆ ಆದ ಕಾರಣ, ಬ್ರಾಹ್ಮಣರು ಮತ್ತು ವೈದಿಕರು ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮಲ್ಲಿಯೇ ಒಡೆದು ಹಾಳುವ ನೀತಿಯನ್ನು ತಂದು, ನಮ್ಮನ್ನು ಹೊಡೆದಾಡಲು ಬಿಟ್ಟು, ಅವರು ಅಧಿಕಾರದ ಹಾದಿಯನ್ನು ಕಂಡುಕೊಂಡರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರ: ಇಬ್ಬರು ಮೈಸೂರಿನ ಮಾಜಿ ಮುಖ್ಯಮಂತ್ರಿಗಳು ಶತಮಾನಗಳು ಕಂಡರೂ ಜನರ ಮನಸ್ಸಿನಲ್ಲಿ ಹಚ್ಚಳಿಯದೇ ಉಳಿಯುವವರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಪರಿವರ್ತನೆಯ ಹರಿಕಾರರಾದರೆ, ಸಿದ್ದರಾಮಯ್ಯ ಅಭಿವೃದ್ಧಿಯ ಹರಿಕಾರ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಅನ್ನಭಾಗ್ಯವನ್ನು ಜಾರಿಮಾಡಿದ ದಿಟ್ಟ ವ್ಯಕ್ತಿ. ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಲ್ಲಿ ಸಾಕಷ್ಟು ಹಣವನ್ನು ನೀಡಿದ ಮೇರು ವ್ಯಕ್ತಿತ್ವದ ಮುಖ್ಯಮಂತ್ರಿ. ದಲಿತರೇ ಮುಖ್ಯಮಂತ್ರಿಯಾಗಿದ್ದರೂ ಇಷ್ಟೊಂದು ಹಣವನ್ನು ನೀಡಲು ಸಾಧ್ಯವಿರಲಿಲ್ಲ. ಸಾಮಾಜಿಕ ನ್ಯಾಯಕ್ಕೆ ಎಂದೂ ಸೋಲೇ ಇಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಸೋಲು, ಅಹಿಂದ ವರ್ಗದ ಸಾವು ಎಂದು ವಿಶ್ಲೇಷಿಸಿದರು.

ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೂ ನೀಡಿದಷ್ಟು ಅನುದಾನವನ್ನು ಯಾವ ಮುಖ್ಯಮಂತ್ರಿಯೂ ನೀಡಿರಲಿಲ್ಲ. ಆದರೂ ಅವರು ಸೋಲು ಕಂಡರು. ಹಲವಾರು ರಾಜಕೀಯ ತಿರುವುಗಳು ಸಿದ್ದರಾಮಯ್ಯ ಅವರ ಸೋಲಿಗೆ ಕಾರಣವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಡಿ.ಉಮಾಪತಿ, ಪ್ರಗತಿಪರ ಚಿಂತಕ ಸಾಹಿತಿ ಇಂಧೂದರ ಹೊನ್ನಾಪುರ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ (ನಿವೃತ್ತ) ಎಂ.ರಾಮಯ್ಯ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಸಾಹಿತಿ ಕಾಳೇಗೌಡ ನಾಗವಾರ, ಕೆ.ಎಸ್.ಶಿವರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News