ಆ.7 ರಂದು ರಾಷ್ಟ್ರ ವ್ಯಾಪ್ತಿ ಸಾರಿಗೆ ಮುಷ್ಕರ

Update: 2018-07-30 15:17 GMT

ಬೆಂಗಳೂರು, ಜು.30: ಮೋಟಾರು ವಾಹನ(ತಿದ್ಧುಪಡಿ) ಮಸೂದೆ-2017 ಅನ್ನು ಹಿಂಪಡೆಯಬೇಕು ಹಾಗೂ ಸಾರಿಗೆ ಉದ್ದಿಮೆಯನ್ನು ರಕ್ಷಿಸಬೇಕು ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಆ.7 ರಂದು ರಾಷ್ಟ್ರವ್ಯಾಪ್ತಿ ಸಾರಿಗೆ ಮುಷ್ಕರ ನಡೆಸಲು ರಸ್ತೆ ಸಾರಿಗೆ ರಂಗದಲ್ಲಿರುವ ಕಾರ್ಮಿಕರು ಮತ್ತು ಮಾಲಕರ ಸಂಘಟನೆಗಳ ವೇದಿಕೆ ನಿರ್ಧರಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಮುಖಂಡ ಕೆ.ಪ್ರಕಾಶ್, ದೇಶದಲ್ಲಿ ರಸ್ತೆ ಸಾರಿಗೆ ಉದ್ದಿಮೆಯಲ್ಲಿರುವ ಆಟೋ ರಿಕ್ಷಾ, ಟ್ಯಾಕ್ಸಿ, ಖಾಸಗಿ ಬಸ್, ಟ್ರಕ್, ರಾಜ್ಯ ರಸ್ತೆ ಸಾರಿಗೆ ನಿಗಮಗಳು, ವರ್ಕ್‌ಶಾಪ್‌ಗಳು, ಬಿಡಿ ಭಾಗಗಳ ಅಂಗಡಿಗಳು ಎಲ್ಲವೂ ಬಿಕ್ಕಟ್ಟಿನ ಸ್ಥಿತಿಯಲ್ಲಿವೆ. ಅಧಿಕಾರಿಗಳ ಮತ್ತು ಪೊಲೀಸರ ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಮೋಟಾರು ವಾಹನ ಕಾಯ್ದೆಗೆ ತಿದ್ಧುಪಡಿ ತಂದು ಕೋಟ್ಯಂತರ ವಾಹನ ಮಾಲಕರನ್ನು ಮತ್ತು ಕಾರ್ಮಿಕರನ್ನು ನಾಶ ಮಾಡಿ, ಇಡೀ ಉದ್ದಿಮೆಯನ್ನು ಭಾರತೀಯ ಮತ್ತು ವಿದೇಶಿ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಹೊರಟಿದೆ. ಕಾರ್ಮಿಕರಿಗೆ ಮತ್ತು ವಾಹನ ಮಾಲಕರಿಗೆ ಕಿರಿಕಿರಿ ಉಂಟು ಮಾಡುವ ಈ ಕಾಯ್ದೆ ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದರು.

ಕೇಂದ್ರ ಸರಕಾರ ತರಲು ಹೊರಟಿರುವ ಈ ಮಸೂದೆ, ರಾಜ್ಯ ಸರಕಾರದ ಅಧಿಕಾರವನ್ನು ಮೊಟಕುಗೊಳಿಸಲಿದೆ. ಈಗ ರಾಜ್ಯಗಳ ಕೈಯಲ್ಲಿರುವ ಅಂತರ್‌ರಾಜ್ಯ ಪರ್ಮಿಟ್ ನೀಡುವ ಅಧಿಕಾರ ಪೂರ್ಣವಾಗಿ ಕೇಂದ್ರದ ಪಾಲಾಗಲಿದೆ. ಇದು ರಾಜ್ಯಗಳಿಗೆ ನೀಡಿರುವ ವಿಶೇಷ ಹಕ್ಕನ್ನು ಕಸಿದುಕೊಳ್ಳುವ ತಂತ್ರವಾಗಿದೆ. ಅಲ್ಲದೆ, ಖಾಸಗಿ ವಾಹನಗಳಿಗೆ ಅನುಮತಿಯಿಲ್ಲದೆ ವಾಹನ ಓಡಿಸಲು ಅವಕಾಶ ಸಿಗಲಿದೆ ಎಂದು ದೂರಿದರು.

ಮಸೂದೆ ಜಾರಿಯಾದರೆ ಅಪಘಾತಗಳಿಗೆ ಚಾಲಕರು ಮತ್ತು ನಿರ್ವಾಹಕರನ್ನೇ ಹೊಣೆ ಮಾಡಲಾಗುತ್ತಿದೆ. ಮಿತಿ ಇಲ್ಲದ ರೀತಿಯಲ್ಲಿ ದಂಡ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಅಪಘಾತಗಳನ್ನು ಕಡಿಮೆ ಮಾಡಲೆಂದೆ ಈ ಮಸೂದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಟೀಕಿಸಿದರು.

ಅಪಘಾತಗಳಿಗೆ ಚಾಲಕರು ಮತ್ತು ನಿರ್ವಾಹಕರನ್ನು ಹೊಣೆ ಮಾಡಲಾಗಿದೆ. ಇತಿ ಮಿತಿಯಿಲ್ಲದ ರೀತಿಯಲ್ಲಿ ದಂಡಗಳ ಪ್ರಮಾಣವನ್ನು ನಿಗದಿ ಮಾಡಲಾಗಿದೆ. ರಸ್ತೆಗಳ ಪರಿಸ್ಥಿತಿ, ವಾಹನ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ವಾಹನಗಳು ಸೇರಿದಂತೆ ಹಲವು ಕಾರಣಗಳು ಮಸೂದೆಯಲ್ಲಿ ಪರಿಗಣಿಸಲಾಗಿದೆ. ಆದರೆ, ಕೇಂದ್ರ ಸರಕಾರ ಅಪಘಾತಗಳನ್ನು ಕಡಿಮೆ ಮಾಡಲು ಈ ಮಸೂದೆ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಎಸ್ಸಾರ್ಟಿಸಿ ನೌಕರರ ಫೆಡರೇಷನ್‌ನ ಅಧ್ಯಕ್ಷ ಎಚ್.ಡಿ.ರೇವಪ್ಪ, ಒಟಿಯು ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ, ಆಟೋ ಚಾಲಕರ ಸಂಘದ ರುದ್ರಮೂರ್ತಿ, ಟ್ಯಾಕ್ಸಿ ಚಾಲಕರ ಸಂಘದ ಸಿದ್ದಯ್ಯ, ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಪುಟ್ಟಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News