ಶಿರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣ: ಮಾಧ್ಯಮಗಳ ಸುದ್ದಿ ಪ್ರಸಾರಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

Update: 2018-07-30 15:54 GMT

ಬೆಂಗಳೂರು, ಜು.30: ಉಡುಪಿಯ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಸುದ್ದಿ ಪ್ರಸಾರಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.

ಆಧಾರ ರಹಿತ ಹಾಗೂ ಅವಹೇಳನಕಾರಿ ಸುದ್ದಿ ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಉಡುಪಿ ಅಷ್ಟಮಠ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಚ್.ವಿ.ಗೌತಮ ಮತ್ತು ಧಾರ್ಮಿಕ ಚಿಂತಕ ಬಿ.ರಾಮಚಂದ್ರ ಉಪಾಧ್ಯಾಯ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಬಿ.ವಿ.ಆಚಾರ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪರ್ಯಾಯ ತನಿಖೆ ನಡೆಸಿ ಶಿಕ್ಷೆಯನ್ನೂ ಘೋಷಿಸುತ್ತಿವೆ. ಶಿಕ್ಷೆಯ ಅನುಷ್ಠಾನವೊಂದೇ ಬಾಕಿ ಉಳಿದಿದೆ ಎಂಬಂತೆ ಹದ್ದುಮೀರಿ ವರ್ತಿಸುತ್ತಿವೆ. ಹೀಗಾಗಿ, ಸ್ವಾಮೀಜಿ ಸಾವಿಗೆ ಸಂಬಂಧಿಸಿದ ಸುದ್ದಿಗಳ ಪ್ರಸಾರಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಿದರು.

ಪ್ರತಿವಾದಿಗಳಾದ ಖಾಸಗಿ ಟಿ.ವಿ.ಚಾನೆಲ್‌ಗಳು, ವಾರ ಪತ್ರಿಕೆಗಳು, ಕನ್ನಡ, ಇಂಗ್ಲಿಷ್ ದಿನಪತ್ರಿಕೆಗಳು, ಅಂತರ್ಜಾಲ ಸುದ್ದಿ ತಾಣಗಳ ಸಂಪಾದಕರು ಹಾಗೂ ರಾಜ್ಯ ಗೃಹ ಕಾರ್ಯದರ್ಶಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ವಿಚಾರಣೆಯನ್ನು ಆಗಸ್ಟ್ 2ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಎಂ.ಅರುಣ ಶ್ಯಾಮ್ ವಕಾಲತ್ತು ವಹಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News