ಮಂಡ್ಯ: ರಸ್ತೆ ಅಪಘಾತಕ್ಕೆ ಯುವಕ ಮೃತ್ಯು
ಮಂಡ್ಯ,ಜು.30: ಬೈಕ್‍ನಿಂದ ಅಯತಪ್ಪಿ ಕೆಳಗೆ ಬಿದ್ದವನ ಮೇಲೆ ಹಿಂದಿನಿಂದ ಬಂದ ಬೊಲೆರೋ ಜೀಪೊಂದು ಹರಿದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ನಾಗಮಂಗಲ ತಾಲೂಕಿನ ನೇರಲೆಕೆರೆ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.
ದೇವಲಾಪುರ ಹೋಬಳಿಯ ಯಡವನಹಳ್ಳಿ ಗ್ರಾಮದ ವಿಜಯಕುಮಾರ್(22) ಸ್ಥಳದಲ್ಲೇ ಮೃತಪಟ್ಟ ಯುವಕ.
ತನ್ನ ಪಲ್ಸರ್ ಬೈಕ್‍ನಲ್ಲಿ ಮೈಸೂರಿನಿಂದ ಹಿಂತಿರುಗುತ್ತಿದ್ದಾಗ ಸಂಜೆ 6.30ರ ವೇಳೆ ಮೈಸೂರು-ಬೀದರ್ ಹೆದ್ದಾರಿಯಲ್ಲಿ ನೇರಲೆಕೆರೆ ಗೇಟ್ ಬಳಿ ವಿಜಯಕುಮಾರ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆ ಕ್ಷಣ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬೊಲೆರೋ (ಕೆಎ 04-ಎಬಿ 2059) ಜೀಪ್ ಆತನ ತಲೆಯ ಮೇಲೆ ಹರಿದ ಪರಿಣಾಮ ವಿಜಯಕುಮಾರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಅವಘಡ ಸಂಭವಿಸುತ್ತಲೆ ಬೊಲೆರೋ ಚಾಲಕ ಸ್ಥಳದಲ್ಲೆ ಜೀಪ್ ನಿಲ್ಲಿಸಿ ಪರಾರಿಯಾಗಿದ್ದು, ನಾಗಮಂಗಲ ಪಟ್ಟಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ನಂತರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.