×
Ad

ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಧರಣಿ

Update: 2018-07-30 23:09 IST

ದಾವಣಗೆರೆ,ಜು.30: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಅಸಂಘಟಿತ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. 

ನಗರದ ಶ್ರೀ ಜಯದೇವ ವೃತ್ತದಿಂದ ಒಕ್ಕೂಟದ ಅಧ್ಯಕ್ಷ ಎನ್.ಕೆ. ಚಂದ್ರಶೇಖರ ಇತರರ ನೇತೃತ್ವದಲ್ಲಿ ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗುತ್ತಾ, ಡಿಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ, ರಾಜ್ಯ ಕಾರ್ಮಿಕ ಮಂಡಳಿಯಿಂದ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಕಲ್ಪಿಸಬೇಕು. ಮದುವೆಗೆ ಧನಸಹಾಯ, ವೈದ್ಯಕೀಯ ನೆರವು, ಮಕ್ಕಳಿಗೆ ಶೈಕ್ಷಣಿಕ ಸಹಾಯ, ಅಪಘಾತಕ್ಕೆ ತುತ್ತಾದವರಿಗೆ ಧನಸಹಾಯ ಸೇರಿದಂತೆ ಯಾವುದೇ ಸೌಲಭ್ಯಗಳನ್ನೂ ಕಲ್ಪಿಸದೇ ಮಂಡಳಿಯು ಕಡೆಗಣನೆ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಕಾರ್ಮಿಕ ಇಲಾಖೆ ಅಧಿಕಾರಿಗಳ ಬಳಿ ಯಾವುದೇ ಸೌಲಭ್ಯ ಕೇಳಿಕೊಂಡು ಹೋದರೆ ಬೇಜವಾಬ್ಧಾರಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಕಾರ್ಮಿಕ ಕಚೇರಿಯಲ್ಲೇ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ನಿಮ್ಮ ಕೆಲಸ ಯಾರು ಮಾಡಬೇಕೆಂಬ ಉಡಾಫೆ ಮಾತು ಕಾರ್ಮಿಕ ಅಧಿಕಾರಿಗಳಿಂದ ಕೇಳಬೇಕಾದ ಸ್ಥಿತಿ ಬಂದೊದಗಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರ ಕೂಗಿಗೆ ಸ್ಪಂದಿಸುವವರು ಯಾರೂ ಇಲ್ಲದಂತಾಗಿದೆ ಎಂದು ದೂರಿದರು. 

ಫಲಾನುಭವಿ ಮದುವೆಗೆ 50 ಸಾವಿರ ಸಹಾಯಧನ ನೀಡುತ್ತಿದ್ದು, ಅದನ್ನು 2 ಲಕ್ಷ ರೂ.ಗೆ ಹೆಚ್ಚಿಸಬೇಕು. ಕಾರ್ಮಿಕನ ಕುಟುಂಬಕ್ಕೆ ನೀಡುವ ಹೆರಿಗೆ ವೆಚ್ಚ ಹೆಚ್ಚಿಸಬೇಕು. ಕಾರ್ಮಿಕರಿಗೆ 1 ಸಾವಿರ ರೂ. ಬದಲಿಗೆ 10 ಸಾವಿರ ರೂ.ಮಾಸಿಕ ಪಿಂಚಣಿ ಹೆಚ್ಚಳ ಮಾಡಬೇಕು. ಪ್ರಮುಖ ಕಾಯಿಲೆಗೆ ಚಿಕಿತ್ಸೆಗೆ ಧನಸಹಾಯವನ್ನು ಚಿಕಿತ್ಸೆ ನಂತರವೂ ಇತರೆ ಖರ್ಚು ಮಂಡಳಿಯೇ ಭರಿಸಬೇಕು. ಚಿಕಿತ್ಸೆಗೆ ಧನಸಹಾಯ ಕೋರಿ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಚಿಕಿತ್ಸೆಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು. 

ಚಿಕಿತ್ಸೆಗೆ ವೆಚ್ಚವಾಗುವ ಹಣದ ಶೇ.20-30ರಷ್ಟು ಮಾತ್ರ ನೀಡುವುದು ಯಾವ ನ್ಯಾಯ? ಸಂಪೂರ್ಣ ಧನಸಹಾಯ ನೀಡಬೇಕು, ಇಎಸ್‍ಐ ಸೌಲಭ್ಯ ಕಲ್ಪಿಸಬೇಕು. ಕಾರ್ಮಿಕರ ಸಹಜ ಸಾವಿಗೆ ಈಗಿರುವ ಧನಸಹಾಯವನ್ನು 54 ಸಾವಿರದಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು. ನಿವೇಶನ ಇಲ್ಲದವರಿಗೆ ಸಬ್ಸಿಡಿ ಸಹಿತ 5 ಲಕ್ಷ ರೂ. ಸಾಲ ಯಾವುದೇ ಷರತ್ತಿಲ್ಲದೇ ನೀಡಬೇಕು. ಒಕ್ಕೂಟದ ಎಲ್ಲಾ ಬೇಡಿಕೆ ಸರ್ಕಾರ ಪ್ರಥಮಾದ್ಯತೆಯ ಮೇಲೆ ಈಡೇರಿಸಬೇಕು ಎಂದು ತಾಕೀತು ಮಾಡಿದ ಅವರು, ನಮ್ಮ ಸಮಸ್ಯೆಗೆ ಸ್ಪಂದಿಸುವ ವ್ಯವದಾನವೂ ಸರ್ಕಾರಕ್ಕಾಗಲೀ, ಇಲಾಖೆಗಾಗಲೀ ಇಲ್ಲದಂತಾಗಿದೆ. ವಿವಿಧ ಬೇಡಿಕೆ ಈಡೇರಿಸುವಂತೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮನವಿ ಅರ್ಪಿಸುವ ಮೂಲಕ ನಮ್ಮ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡುತ್ತೇವೆ. ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಶಿವಕುಮಾರ ಆರ್.ಸುಂಕಾಪುರ, ಆರ್.ನಾಗರಾಜ, ಶಿವಕುಮಾರ, ಎ. ಗುಡ್ಡಪ್ಪ, ಟಿ.ತಿಮ್ಮಣ್ಣ, ಹಾಲಮ್ಮ, ಎಂ.ಜಿ. ಪ್ರಕಾಶ, ರಾಮಾಂಜನೇಯ ಆರ್.ಟಿ.ತಿಪ್ಪೇಶ, ಎಸ್. ಮಂಜುನಾಥ, ಅಬ್ದುಲ್ಲಾ, ಜಯಣ್ಣ, ಕೆ.ಟಿ. ರಂಗನಾಥ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News