ಸ್ವಸಹಾಯ ಸಂಘದ ಸಾಲ ಕೇಳಲು ಬಂದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದರು !
Update: 2018-07-30 23:14 IST
ದಾವಣಗೆರೆ,ಜು.30: ತಾಲೂಕಿನ ಬೇತೂರು ಗ್ರಾಮದಲ್ಲಿ ಸಂಘದ ಸಾಲ ಕೇಳಲು ಬಂದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮಹಿಳೆಯರೇ ಥಳಿಸಿರುವ ಘಟನೆ ಕಳೆದ ರಾತ್ರಿ ನಡೆದಿದೆ ಎನ್ನಲಾಗಿದೆ.
ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಸ್ವಸಹಾಯ ಸಂಘಗಳಲ್ಲಿ ಮಹಿಳೆಯರು ಸಾಲ ಪಡೆದಿದ್ದರು. ಈ ಸಾಲವನ್ನು ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಘಕ್ಕೆ ಸರಿಯಾಗಿ ಕಟ್ಟಿರಲಿಲ್ಲ. ಕೊನೆಗೆ ಮಹಿಳಾ ಸಂಘವೊಂದರ ಸದಸ್ಯೆಯರು ಸಾಲಕೇಳಿದ ಮಹಿಳೆಯನ್ನೇ ಕಳೆದ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3ರ ವರೆಗೆ ಕಟ್ಟಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದ್ದು, ನಂತರ ತಡರಾತ್ರಿ ಗ್ರಾಮದ ಮುಖಂಡರು ಮಹಿಳೆಯರನ್ನು ಮನವೊಲಿಸಿದ್ದಾರೆ. ಬಳಿಕ ಸಂಘದ ಸದಸ್ಯೆಯನ್ನು ಬಿಟ್ಟು ಕಳುಹಿಸಲಾಗಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.