ಮಂಡ್ಯ: ಸಾಲಬಾಧೆಗೆ ರೈತ ಆತ್ಮಹತ್ಯೆ
Update: 2018-07-30 23:47 IST
ಮಂಡ್ಯ, ಜು.30: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್(45) ಎಂಬ ರೈತ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಮನೆಯ ಕೊಠಡಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
30 ಗುಂಟೆ ಜಮೀನು ಹೊಂದಿರುವ ಶ್ರೀನಿವಾಸ್ ವಿಜಯಬ್ಯಾಂಕ್‍ನಲ್ಲಿ ಚಿನ್ನಾಭರಣಗಳ ಮೇಲೆ ಸಾಲ, ಪಿಎಲ್‍ಡಿ ಬ್ಯಾಂಕ್‍ನಲ್ಲಿ ಕುರಿ ಸಾಲ, ಚಿಕ್ಕಾಡೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೃಷಿ ಸಾಲ ಮತ್ತು ಕೈ ಸಾಲ ಸೇರಿದಂತೆ ಒಟ್ಟು 3 ಲಕ್ಷ ರೂ.ಗಳವರೆಗೆ ಸಾಲ ಮಾಡಿದ್ದರು ಎನ್ನಲಾಗಿದೆ.
ಮೃತ ಶ್ರೀನಿವಾಸ್ ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.