ಕರಗಡ ಎರಡನೇ ಹಂತದ ಕಾಮಗಾರಿಗೆ 16.50 ಕೋ. ರೂ. ಪ್ರಸ್ತಾವ: ಸಣ್ಣ ನೀರಾವರಿ ಇಲಾಖಾಧಿಕಾರಿ ಮಾಹಿತಿ

Update: 2018-07-30 18:27 GMT

ಚಿಕ್ಕಮಗಳೂರು, ಜು.30: ಬಯಲುಸೀಮೆ ಭಾಗದ ಕೆರೆ ತುಂಬಿಸುವ ಕರಗಡ ಯೋಜನೆ ಎರಡನೇ ಹಂತದ ಕಾಮಗಾರಿಗೆ 16.50 ಕೋಟಿ ರೂ. ಅನುಧಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮಹೇಶ್ ಮಾಹಿತಿ ನೀಡಿದ್ದಾರೆ.

ತಾಲೂಕು ಪಂಚಾಯತ್‌ನಲ್ಲಿ ಸೋಮವಾರ ಶಾಸಕ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಯ ಮೊದಲನೇ ಹಂತದ ಕಾಮಗಾರಿ ಸ್ವಲ್ಪ ಬಾಕಿ ಇದೆ. ಅಲ್ಲಲ್ಲಿ ನಾಲೆಯ ಮಣ್ಣು ಕುಸಿದು ಬಿದ್ದಿದ್ದು, ಮಣ್ಣು ಬಿದ್ದಿರುವ ಸ್ಥಳದಲ್ಲಿ ಕಟ್ ಅಂಡ್ ಕವರ್ ಕೆಲಸ ಮಾಡಬೇಕಿದೆ. ಕೆಲವೆಡೆ ಬೆಡ್ ಲೇವೆಲ್ ಕಾಮಗಾರಿ ಪೂರ್ಣ ಗೊಂಡಿಲ್ಲ. ಪೂರ್ಣಗೊಳಿಸಲು 3.50 ಕೋಟಿ ರೂ. ಬೇಕಾಗುತ್ತದೆ. ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ 20 ಕೋಟಿ ರೂ. ಬೇಕಾಗುತ್ತದೆ ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಗುತ್ತಿಗೆದಾರನ ವಿಳಂಬದಿಂದ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆತನ ಸಾಮಥ್ಯ ಏನು ಎಂದು ಈಗಾಗಲೇ ತಿಳಿದಿದೆ. ಆತನಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಿ ಬೇರೆಯವರಿಗೆ ಕಾಮಗಾರಿ ನೀಡಿ, ಕಳಪೆ ಕಾಮಗಾರಿ, ವಿಳಂಬ ತನಿಖೆಗೆ ಲೋಕಾಯುಕ್ತಕ್ಕೆ ದೂರು ನೀಡುವಂತೆ ಇತ್ತೀಚೆಗೆ ನಡೆದ ತ್ರೈಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತಕ್ಷಣ ಲೋಕಾಯುಕ್ತಕ್ಕೆ ಸಭೆಯ ತೀರ್ಮಾನದ ಪ್ರತಿ ಕಳಿಸಿ ಎಂದು ಇಒಗೆ ಶಾಸಕ ಸಿ.ಟಿ.ರವಿ ಸೂಚಿಸಿದರು. ಮೋಟಾರ್ ಪಂಪ್ ಬಳಸಿ ನಾಲೆಗೆ ನೀರು ಹರಿಸಲು 50 ಎಚ್.ಪಿ. ಮೋಟರ್ ಖರೀದಿಗೆ ತಕ್ಷಣ ಕೊಟೇಶನ್ ತಯಾರಿಸಬೇಕು. ಇತ್ತೀಚೆಗೆ ಆದ ಉತ್ತಮ ಮಳೆಯಿಂದ ನಾಲೆಯ ಅಲ್ಲಲ್ಲಿ ಸ್ವಲ್ಪಪ್ರಮಾಣದ ನೀರು ಹರಿಯುತ್ತಿದೆ. ಕಳಸಾಪುರ ಕೆರೆುವರೆಗೂ ನೀರು ತಲುಪಿಲ್ಲ. ವಿಳಂಬ ಮಾಡದೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕೆಂದು ಆದೇಶಿಸಿದರು.

ವಿಷನ್ 2023 ಯೋಜನೆಯಡಿ ಯಗಚಿ ನದಿ ಪಾತ್ರ ಅಭಿವೃದ್ಧಿ ರಾಮೇಶ್ವರ ಕೆರೆ ಬಳಿಯಿಂದ ಚನ್ನಾಪುರ ಸೇತುವೆ ವರೆಗಿನ 7.50ಕಿ.ಮೀ. ದೂರದ ಯಗಚಿ ನದಿ ಪಾತ್ರ ಅಭಿವೃದ್ಧಿಪಡಿಸಲು ವಿಷನ್ 2023 ಯೋಜನೆಯಡಿ 3 ಕೋಟಿ ರೂ. ಗಳ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸಬರ್ಮತಿ ರಿವರ್ ಫ್ರೆಂಟ್ ಮಾದರಿಯಲ್ಲಿ ಯಗಚಿ ನದಿ ಪಾತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಸಭೆಯಲ್ಲಿ ಮಾಹಿತಿ ನೀಡಿದರು.

ಮಿನಿ ವಿಧಾನಸೌಧಕ್ಕೆ 5ಕೋ.ರೂ. ಬಿಡುಗಡೆ
ನಗರದ ಮಿನಿ ವಿಧಾನಸೌಧ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಐದು ಕೋಟಿ ರು. ಬಿಡುಗಡೆಯಾಗಿದೆ. ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಗಮನಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನದಿ ಪಾತ್ರದಲ್ಲಿ ಸಾಕಷ್ಟು ಒತ್ತುವರಿಯಾಗಿದೆ. ಮನೆ, ಗೋದಾಮು, ಬಡಾವಣೆ ನಿರ್ಮಿಸಲಾಗಿದೆ. ನದಿಪಾತ್ರವನ್ನು ಸರ್ವೇ ಮಾಡಿ ಗುರುತಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ವೇ ಕಾರ್ಯಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಿದ್ದಾರೆ.
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News