ಉ.ಕ ಭಾಗದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ: ಯಡಿಯೂರಪ್ಪ
ಹುಬ್ಬಳ್ಳಿ, ಜು.31: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗನ್ನು ಶಮನ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ವಿಮಾನ ನಿಲ್ದಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಭಾಷಣಗಳಲ್ಲಿ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಇಂತಹ ಮಾತುಗಳನ್ನು ಆಡುವುದನ್ನು ಬಿಡಬೇಕೆಂದು ತಿಳಿಸಿದರು.
ಬೆಳಗಾವಿಯಲ್ಲಿ ನೂರಾರು ಜನ ಸ್ವಾಮಿಗಳು ಪ್ರತ್ಯೇಕ ರಾಜ್ಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದು ಅವರ ಮನವೊಲಿಸಲು ಪ್ರಯತ್ನ ಮಾಡಬೇಕು. ಇಡೀ ರಾಜ್ಯಕ್ಕೆ ಅನ್ನ ಕೊಡುತ್ತಿರುವುದು ಉತ್ತರ ಕರ್ನಾಟಕ. ಬಜೆಟ್‌ನಲ್ಲಿ ಆಲಮಟ್ಟಿ ನೀರಾವರಿ ಯೋಜನೆ ಬಗ್ಗೆ ನಯಾ ಪೈಸೆ ನೀಡಿಲ್ಲವೆಂದು ಅವರು ಆರೋಪಿಸಿದರು.
ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲೂ ಈ ಭಾಗಕ್ಕೆ ಅನ್ಯಾಯವಾಗಿದೆ. ಹೈ-ಕರ್ನಾಟಕದಲ್ಲಿ ಸಾಕಷ್ಟು ಹುದ್ದೆ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಇವರು ಮನಸ್ಸು ಮಾಡಿಲ್ಲ. ಆಲಮಟ್ಟಿ ಉದ್ಯಾನವನವನ್ನ ಅಭಿವೃದ್ಧಿ ಮಾಡಿಲ್ಲ. ಆದರೆ, ಕೆಆರ್‌ಎಸ್‌ನ್ನು ಅಭಿವೃದ್ಧಿ ಮಾಡಿದ್ದಾರೆ ಎಂದು ಅವರು ಹೇಳಿದರು. ನಾನು ಬೆಳಗಾವಿ ಸುವರ್ಣಸೌಧ ಮುಂದೆ ನಡೆಯುತ್ತಿರುವ ಪ್ರತಿಭಟನಾಕಾರರಲ್ಲಿ ಮನವಿ ಮಾಡುತ್ತೇನೆ. ಅಭಿವೃದ್ಧಿಗೆ ಒತ್ತಾಯಿಸಿ ಹೋರಾಟ ಮಾಡುವುದು ತಪ್ಪಲ್ಲ. ಆದರೆ, ರಾಜ್ಯವನ್ನು ಇಬ್ಭಾಗ ಮಾಡುವಂತಹ ಪ್ರಸ್ತಾಪ ಬೇಡವೆಂದು ಅವರು ಮನವಿ ಮಾಡಿದರು.