×
Ad

ಕರ್ನಾಟಕವು ಹಿಂದುಸ್ಥಾನಿ ಸಂಗೀತದ ತವರುಮನೆ: ಡಾ.ಪಾಟೀಲ ಪುಟ್ಟಪ್ಪ

Update: 2018-07-31 18:45 IST

ಧಾರವಾಡ, ಜು.31: ಕರ್ನಾಟಕ ರಾಜ್ಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಅನೇಕ ಜನ ಹಿಂದುಸ್ಥಾನಿ ಸಂಗೀತ ಕಲಾವಿದರನ್ನು ನೀಡಿದೆ. ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ಅವರಂತಹ ಸಂಗೀತ ರತ್ನಗಳನ್ನು ನೀಡಿರುವ ಕರ್ನಾಟಕವು ಹಿಂದುಸ್ಥಾನಿ ಸಂಗೀತದ ತವರುಮನೆಯಾಗಿದೆ ಎಂದು ನಾಡೋಜ ಡಾ.ಪಾಟೀಲ ಪುಟ್ಟಪ್ಪಹೇಳಿದ್ದಾರೆ.

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ‘ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ಅವರ ಸಾಕ್ಷ ಚಿತ್ರ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೋಗಿಲೆಯ ಕಂಠಸಿರಿ ಹೊಂದಿದ್ದ ಪಂ.ಬಸವರಾಜ ರಾಜಗುರು ಅಪಾರ ಶಿಷ್ಯವರ್ಗವನ್ನು ಹೊಂದಿದ್ದರು. ಇಂದು ಅವರಿಂದ ಹಿಂದುಸ್ಥಾನಿ ಸಂಗೀತ ಕಲೆಯನ್ನು ಕಲಿತ ಶಿಷ್ಯವರ್ಗ ರಾಷ್ಟ್ರದಾದ್ಯಂತ ಅದರ ಕಂಪನ್ನು ಹರಡುತ್ತಿದೆ. ಪಂ. ಬಸವರಾಜ ರಾಜಗುರು ನಮ್ಮವರು, ನಮ್ಮ ಧಾರವಾಡದವರು ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಅವರಂತಹ ಪುಣ್ಯವಂತರನ್ನು ಪಡೆದ ಈ ನಾಡು ಭಾಗ್ಯಶಾಲಿ ಎಂದು ಅವರು ಹೇಳಿದರು.

ಸರಕಾರ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮರ್ಥರನ್ನು ಮತ್ತು ಅವರ ಒಡನಾಡಿ ಶಿಷ್ಯರನ್ನು ನೇಮಿಸಿದ್ದು ಹೆಮ್ಮೆಯ ಸಂಗತಿ. ರಾಜಗುರು ಅವರ ಜೀವನ ಸಾಧನೆಗಳನ್ನು ಮತ್ತು ಕಲಾಸೇವೆಯನ್ನು ಗುರುತಿಸಿ ಅದನ್ನು ಮುಂದಿನ ಜನಾಂಗಕ್ಕೆ ದೊರಕುವಂತೆ ಸಾಕ್ಷಚಿತ್ರ ರೂಪದಲ್ಲಿ ಸಂಗ್ರಹಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಪಾಟೀಲ ಪುಟ್ಟಪ್ಪತಿಳಿಸಿದರು.

ವೇದಿಕೆಯಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಟ್ರಸ್ಟ್ ಸದಸ್ಯರಾದ ಭಾರತಿದೇವಿ ರಾಜಗುರು, ಡಾ.ಉದಯಕುಮಾರ ದೇಸಾಯಿ, ನಿಜಗುಣ ರಾಜಗುರು ಹಾಗೂ ಡಾ.ಶಶಿಧರ ನರೇಂದ್ರ, ಸಂಗೀತ ಕಲಾವಿದ ಪಂ.ಗಣಪತಿ ಭಟ್ ಹಾಸನಿಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News