ಪ್ರತ್ಯೇಕ ರಾಜ್ಯದ ಬೇಡಿಕೆ ಕೈ ಬಿಡಿ: ಯಡಿಯೂರಪ್ಪ ಮನವಿ
ಬೆಳಗಾವಿ, ಜು.31: ಉತ್ತರ ಕರ್ನಾಟಕ ಅಭಿವೃದ್ಧಿಗೆ ಸದನದ ಒಳಗೆ, ಹೊರಗೆ ಬಿಜೆಪಿ ಹೋರಾಟ ಮಾಡಲಿದ್ದು, ಪ್ರತ್ಯೇಕ ರಾಜ್ಯ ಹೋರಾಟ ಕೈ ಬಿಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಬಿಜೆಪಿಯ 104 ಸದಸ್ಯರಿದ್ದು, ಉ.ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳು ಜಾರಿಗೆ ತರುವ ನಿಟ್ಟಿನಲ್ಲಿ ಬಿಜೆಪಿ ಸದಸ್ಯರು ಸದನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಆ.2ರಂದು ಪ್ರತ್ಯೇಕ ರಾಜ್ಯಕ್ಕಾಗಿ ನೀಡಿರುವ ಬಂದ್ ಕರೆ ಹಿಂಪಡೆಯಬೇಕೆಂದು ತಿಳಿಸಿದರು.
ನಾಡಿನ ಹೆಮ್ಮೆಯ ಸಾಹಿತಿಗಳಾದ ಆಲೂರು ವೆಂಕಟರಾಯರು, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ನೇತೃತ್ವದ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ನಿಜಾಮರ ಆಡಳಿತ, ಮುಂಬೈ, ಮದ್ರಾಸ್, ಕೇರಳ ಪ್ರಾಂತ್ಯದ ಅನೇಕ ಕನ್ನಡ ಪ್ರದೇಶಗಳನ್ನು ಒಂದು ಮಾಡಲಾಗಿದೆ. ಇದನ್ನು ಪುನಃ ವಿಭಾಗಿಸುವಂತಹ ಕೃತ್ಯಕ್ಕೆ ಯಾರೊಬ್ಬರೂ ಕೈ ಹಾಕಬಾರದು ಎಂದು ಅವರು ತಿಳಿಸಿದರು.
ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಏನೇನೂ ಕೊಡುಗೆ ನೀಡಿಲ್ಲ. ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದೇ ಹಾದಿಯಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಮುಖಂಡರು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಂಡು, ಉ.ಕರ್ನಾಟಕ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ಅವರು ಹೇಳಿದರು.