ಮೈಸೂರು: ಪ್ರತ್ಯೇಕ ರಾಜ್ಯದ ಕೂಗು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ
ಮೈಸೂರು,ಜು.31: ಪ್ರತ್ಯೇಕ ರಾಜ್ಯಕ್ಕೆ ಮೈಸೂರಿನಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯ ಬೇಡ ಎಂದು ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ಗನ್‍ಹೌಸ್ ವೃತ್ತದ ಕುವೆಂಪು ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ರಾಜಕಾರಣದ ಸ್ವಾರ್ಥಕ್ಕಾಗಿ ಪ್ರತ್ಯೇಕತೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಮತ್ತೊಂದು ರಾಜ್ಯ ಬೇಡವೆಂದು ಒತ್ತಾಯಿಸಿದರು.
ಉಳಿಯಲಿ ಉಳಿಯಲಿ ಅಖಂಡ ಕರ್ನಾಟಕ ಉಳಿಯಲಿ ಎಂದು ಘೋಷಣೆ ಕೂಗಿದರಲ್ಲದೇ, ವಿಭಜನೆ ಯಾವುದೇ ಕಾರಣಕ್ಕೂ ಆಗಬಾರದು ಎಂದರು. ಶ್ರೀರಾಮುಲು ಕಾರ್ಯಕ್ರಮ ರದ್ದು ಮಾಡುವಂತೆ ಘೋಷಣೆ ಕೂಗಿದ ಅವರು, ರಾಜಕಾರಣಿಗಳ ಕುಮ್ಮಕಿನಿಂದ ಈ ರೀತಿ ನಡೆಯುತ್ತಿದೆ. ಎಲ್ಲ ರಾಜಕಾರಣಿಗಳು ಅಖಂಡ ಕರ್ನಾಟಕ ಉಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ, ಪ್ರೊ.ನಂಜರಾಜೇ ಅರಸ್, ನಾಲಾಬೀದಿ ರವಿ, ಗುರುಬಸಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.