'ಒಡೆಯರ್' ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನಮ್ಮ ಆಕ್ಷೇಪವಿದೆ: ಪ್ರಮೋದಾದೇವಿ ಒಡೆಯರ್
ಮೈಸೂರು,ಜು.31: ಚಿತ್ರವೊಂದಕ್ಕೆ 'ಒಡೆಯರ್' ಎಂದು ಹೆಸರಿಟ್ಟಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ಈ ಚಿತ್ರದಲ್ಲಿ ನಮ್ಮ ಮನೆತನದ ಬಗ್ಗೆ ಚಿತ್ರೀಕರಿಸಿದರೆ ನನ್ನ ಆಕ್ಷೇಪವಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದ ಆವರಣದಲ್ಲಿಂದು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆಯನ್ನು ಸಸಿ ನೆಟ್ಟು ನೀರುಣಿಸುವ ಮೂಲಕ ಆಚರಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಒಡೆಯರ್ ಹೆಸರು ನಮಗೆ ಬಳುವಳಿಯಾಗಿ ಬಂದದ್ದು, ಒಡೆಯರ್ ಹೆಸರು ತುಂಬಾ ಜನ ಇಟ್ಟುಕೊಂಡಿದ್ದಾರೆ. ಆದರೆ ನಮ್ಮ ಮನೆತನಕ್ಕೆ ಸಂಬಂಧಪಟ್ಟಂತೆ ಬಂದರೆ ಆಕ್ಷೇಪವಿದೆ. ಒಡೆಯರ್ ಅಭಿಮಾನಿಗಳು ಕೊಟ್ಟಿರುವ ದೂರು ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದರು.
ವಸ್ತು ಪ್ರದರ್ಶನ ಆವರಣದಲ್ಲಿ ವರ್ಷ ಪೂರ್ತಿ ಪ್ರದರ್ಶನ ಮಾಡಲು ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಜಾಗ ನ್ಯಾಯಾಲಯದ ಮುಖಾಂತರ ನಮಗೆ ಸೇರಿದ್ದಾಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.
ಪ್ರತ್ಯೇಕ ರಾಜ್ಯ ಕೂಗನ್ನು ವಿರೋಧಿಸುತ್ತೇವೆ. ಎಲ್ಲರೂ ಒಗ್ಗಟ್ಟಾಗಿರಬೇಕು. ಪ್ರತಿಯೊಂದು ಪ್ರತ್ಯೇಕವಾದರೆ ದೇಶ ಛಿದ್ರ ಛಿದ್ರವಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು. ರಾಜ್ಯದ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತಗೆದುಕೊಳ್ಳಲಿ ಎಂದರು.