ವಕೀಲ ನೌಶಾದ್ ಖಾಸಿಂಜೀ ಕೊಲೆ ಪ್ರಕರಣ: ಐವರು ಆರೋಪಿಗಳ ಖುಲಾಸೆ
ಬೆಂಗಳೂರು, ಜು.31: ಮಂಗಳೂರಿನ ವಕೀಲ ನೌಶಾದ್ ಖಾಸಿಂ ಜೀ ಅವರ ಕೊಲೆ ಪ್ರಕರಣ ಸಂಬಂಧ ಅಧೀನ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂರನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಬೆಳ್ತಂಗಡಿಯ ನಾಯರ್ ತರ್ಪು ಗ್ರಾಮದ ನಿವಾಸಿ ದಿನೇಶ್ ಶೆಟ್ಟಿ (30), ಕಾವೂರು ಮುಲ್ಲಕಾಡು ನಿವಾಸಿ ಪ್ರತಾಪ್ (32), ಮಂಗಳೂರಿನ ರಿತೇಶ್ ಶೆಟ್ಟಿ (26)ಗೆ ಕಠಿಣ ಜೀವಾವಧಿ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ 2015ರ ನ.25 ರಂದು ತೀರ್ಪು ನೀಡಿತ್ತು. ಹಾಗೆಯೇ ಪ್ರಕರಣದ ಸಹ ಆರೋಪಿಗಳಾದ ಕದ್ರಿ ನಿವಾಸಿ ಸುಬ್ರಹ್ಮಣ್ಯ (32) ಹಾಗೂ ಕೋಡಿಕಲ್‌ನ ಗಣೇಶ್ (33) ಅವರಿಗೆ ತಲಾ 7 ವರ್ಷ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ಐವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರು, ಪ್ರಕರಣದ ಪ್ರತ್ಯಕ್ಷ ಸಾಕ್ಷಿಗಳು ಪ್ರಾಸಿಕ್ಯೂಷನ್ ವಿರುದ್ಧ ಸಾಕ್ಷ ನುಡಿದಿದ್ದಾರೆ. ಆರೋಪಿಗಳಿಂದ ಜಪ್ತಿ ಮಾಡಲಾಗಿದ್ದ ಪಿಸ್ತೂಲ್ ಅನ್ನೇ ಕೊಲೆಗೆ ಬಳಸಲಾಗಿತ್ತು ಎಂಬುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಹೀಗಾಗಿ, ಆರೋಪಿಗಳು ನೌಶಾದ್ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಾಧಾರ ಇಲ್ಲವಾಗಿದೆ ಎಂದು ಅಭಿಪ್ರಾಯಪಟ್ಟಿತು. ನಂತರ ಈ ಐವರನ್ನು ದೋಷಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿತ್ತು.
ಪ್ರಕರಣವೇನು: 2009ರ ಎಪ್ರಿಲ್ 9ರಂದು ರಾತ್ರಿ 8.15ಕ್ಕೆ ಮಂಗಳೂರಿನ ಹಂಪನಕಟ್ಟೆ ಸಮೀಪದ ರಸ್ತೆಯಲ್ಲಿ ವಕೀಲ ನೌಶಾದ್ ಖಾಸಿಂ ಜೀ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಪರ ವಕಾಲತು ನಡೆಸಿರುವುದೇ ಕೊಲೆಗೆ ಕಾರಣ ಎಂದು ತನಿಖೆ ನಡೆಸಿದ್ದ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ತಿಳಿಸಿದ್ದರು. ಅಲ್ಲದೆ, ಪ್ರಕರಣ ಸಂಬಂಧ ಮೇಲ್ಮನವಿದಾರರನ್ನು ಬಂಧಿಸಿ, ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ ಕಾಯ್ದೆಯಡಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.