ಕೋಲಾರ: ಬುಡ್ಗ ಜಂಗಮ ಜಾತಿ ಪ್ರಮಾಣ ಪತ್ರಕ್ಕಾಗಿ ಪ್ರತಿಭಟನೆ

Update: 2018-07-31 17:15 GMT

ಕೋಲಾರ,ಜು.31: ಬುಡ್ಗ ಜಂಗಮ ಉಪ ಜಾತಿಗಳೆಂದು ಪರಿಗಣಿಸಿ ತಾಲೂಕು ಆಡಳಿತದಿಂದ ಜಾತಿ ಪ್ರಮಾಣ ಪತ್ರ ವಿತರಿಸಲು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲೆಯಾದ್ಯಂತ ಜೀವನ ನಡೆಸುತ್ತಿರುವ ಬುಡ್ಗ ಜಂಗಮ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಇದರಿಂದಾಗಿ ಸುಮಾರು ವರ್ಷಗಳಿಂದ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಾಸಿಸುತ್ತಿರುವ ಬುಡ್ಗಜಂಗಮ ಸಮುದಾಯದ ಜನರು ತಮ್ಮ ಹೊಟ್ಟೆಪಾಡಿಗಾಗಿ ತಮ್ಮಲ್ಲಿರುವ ಕಲಾ ಕೌಶಲ್ಯವನ್ನು ಜನರ ಮುಂದೆ ಪ್ರದರ್ಶಿಸಿ ಜನರು ನೀಡುವ ದವಸ ಧಾನ್ಯಗಳಿಂದ ಜೀವನ ನಡೆಸುತ್ತಿದ್ದಾರೆ. ಅದರೆ ಸಮುದಾಯ ರಾಜಕೀಯ, ಅರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದು ಅಸಂಘಟಿತರಾಗಿದ್ದು, ಇವರು ಕಾಲ ಬದಲಾದಂತೆ ದಾರಿಕಾಣದೇ ತಮ್ಮ ಮಕ್ಕಳನ್ನು ಶಾಲೆಗಳಿಗೆ ದಾಖಲಿಸಲು ಹವಣಿಸುತ್ತಿದ್ದಾರೆ. ಅಧಿಕಾರಿಗಳ ತಾರತಮ್ಯದಿಂದ ಇದು ಸಾಧ್ಯವಾಗದೆ ಗ್ರಾಮದಿಂದ ಗ್ರಾಮಕ್ಕೆ ವಲಸೆ ಮಾಡಿ ಬದುಕು ಸಾಗಿಸುತ್ತಾ ಪರಿತಪಿಸಬೇಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು. 

ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಜಾತಿ ಪ್ರಮಾಣ ಪತ್ರ ದೊರೆಯದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನೆ ಧರಣಿ ನಿರತರು ಆರೋಪಿಸಿದರಲ್ಲದೆ, ಬುಡ್ಗ ಜಂಗಮರನ್ನು ಸನ್ಯಾಸಿ, ಕುರುಕುರುಮಾವ, ಕೊಂಡಮಾವ, ಹಗಲುವೇಷ ಭೂಷಣ, ಜೋಗಿ, ಮಶಾಣರುದ್ರ ಎಂಬ ಹೆಸರುಗಳಿಂದ ಕೆರೆಯುತ್ತಾರೆ. ಬುಡ್ಗ ಜಂಗಮದ ಎಂಬುವುದು ವೇಷ ಭೂಷಣಗಳಾಗಿರುತ್ತವೆ, ಇದು ಜಾತಿ ಹೆಸರಲ್ಲ ಎಂದರು.

ಪ್ರತಿಭಟನೆಯಲ್ಲಿ ಬುಡ್ಗ ಜಂಗಮದ ಜಿಲ್ಲಾಧ್ಯಕ್ಷ ಕೆ.ಎಸ್.ಕೃಷ್ಣಮೂರ್ತಿ, ಮುಖಂಡರಾದ ಎಚ್.ಸಿ.ಮುರುಗೇಶ್, ಎಂ.ನಾರಾಯಣಪ್ಪ, ಶಂಕರ, ಸಿ.ಮುನಿಯಪ್ಪ, ಕೆ.ಎಸ್. ನಾಗರಾಜ್, ಕೆ.ಎಸ್. ಮುನಿಯಪ್ಪ, ಮಂಜು, ಗಂಗಾರಾಮಪ್ಪ, ಶ್ರೀರಾಮ್, ಮುನಿಶ್ವಾನಪ್ಪ, ವಿಜು, ಚಿನ್ನಪ್ಪಯ್ಯ, ರಾಮಪ್ಪ, ವೆಂಕಟಪ್ಪ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News