ನಿವೇಶನ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ: ಶಾಸಕ ಕುಮಾರಸ್ವಾಮಿ

Update: 2018-07-31 17:29 GMT

ಚಿಕ್ಕಮಗಳೂರು, ಜು.31: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿನ ನಿವೇಶನ ಹಾಗೂ ವಸತಿ ರಹಿತ ಬಡವರಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಸದ್ಯದಲ್ಲೇ ನಿವೇಶನ ಮತ್ತು ಮನೆ ವಿತರಿಸಲಾಗುವುದು ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ಮಲ್ಲಂದೂರಿನಲ್ಲಿ 38 ಲಕ್ಷ ರೂ. ವೆಚ್ಚದ ಬ್ಯಾರವಳ್ಳಿ ಗ್ರಾಮ ಪಂಚಾಯತ್ ನೂತನ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ನಿವೇಶನ ಮತ್ತು ವಸತಿ ರಹಿತರ ಪಟ್ಟಿಯ ಪರಿಷ್ಕರಣೆ ಈಗಾಗಲೇ ನಡೆಯುತ್ತಿದ್ದು, ಎಲ್ಲಾ ವರ್ಗದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ಮತ್ತು ವಸತಿ ರಹಿತರಿಗೆ ಮನೆ ನೀಡಲಾಗುವುದು ಎಂದು ತಿಳಿಸಿದರು.

ನಿವೇಶನ ಮತ್ತು ವಸತಿ ರಹಿತರ ಪಟ್ಟಿ ಪರಿಷ್ಕರಣೆಗೆ ಮಂಗಳವಾರ ಅಂತಿಮ ದಿನವಾಗಿರುವ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದೊಂದಿಗೆ ಮಾತನಾಡಿ ಪರಿಷ್ಕರಣೆ ಕಾಲಾವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಲಾಗುವುದು ಎಂದರು.

ನೂತನವಾಗಿ ನಿರ್ಮಿಸುತ್ತಿರುವ ಗ್ರಾಪಂ ಕಟ್ಟಡವನ್ನು ಜಿಲ್ಲೆಯಲ್ಲೇ ಮಾದರಿಯಾಗುವಂತೆ ನಿರ್ಮಿಸಬೇಕು 1 ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ತಾಲೂಕು ಪಂಚಾಯತ್ ಸದಸ್ಯೆ ಶಾರದಾ ಶಶಿಧರ್, ಮಾಜಿ ಅಧ್ಯಕ್ಷ ಎನ್.ಎಂ.ಮಂಜುನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಸಿ.ರಘುನಾಥ್, ಉಪಾಧ್ಯಕ್ಷ ನಾಗೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗರಾಜ್, ಬಿಜೆಪಿ ಹೋಬಳಿ ಅಧ್ಯಕ್ಷ ರವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್.ಎಸ್.ಜಗನ್ನಾಥ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News