ಅಕ್ರಮ ಮದ್ಯ, ಕಳ್ಳಭಟ್ಟಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಿ: ಉಪವಿಭಾಗಾಧಿಕಾರಿ ಅಮರೇಶ್ ಸೂಚನೆ

Update: 2018-07-31 18:02 GMT

ಚಿಕ್ಕಮಗಳೂರು, ಜು.31; ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವು ಸಮಾಜದ ಕಟ್ಟೆಕಡೆಯವರೆಗೂ ದೊರಕಬೇಕು ಎಂದು ಉಪವಿಭಾಗ ಅಧಿಕಾರಿ ಅಮರೇಶ್ ತಿಳಿಸಿದರು.

ಮಂಗಳವಾರ ನಗರದ ತಾಪಂ ಸಭಾಂಗಣದಲ್ಲಿ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯ ಕಂದಾಯ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಕಳ್ಳಭಟ್ಟಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಕುಲ ಕಸುಬುಆದಾರದ ಮೇಲೆ ಜಾತಿ ಪ್ರಮಾಣ ಪತ್ರ ನೀಡದೇ ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆ ನೆಡೆಸಿ ಜಾತಿ ಪ್ರಮಾಣ ನೀಡಬೇಕು. ಮುಂಡಾಲ ಜಾತಿಗೆ ಒಂದು ಕುಟುಂಬಕ್ಕೆ ಒಮ್ಮೆ ಜಾತಿ ಪ್ರಮಾಣ ಕೊಟ್ಟರೆ ಅದು ಅವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಸರಕಾರದ ಅನೇಕ ಯೋಜನೆಗಳ ಬಗ್ಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಲನಿಗಳಲ್ಲಿ ಹೆಚ್ಚು ಮಾಹಿತಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಕಾರದ ಸೌಲಭ್ಯವನ್ನು ನೀಡಬೇಕೆಂದರು.

ಜಿಪಂ ಸದಸ್ಯ ಶೃಂಗೇರಿ ಶಿವಣ್ಣ, ಅಮಿತಮುತ್ತಪ್ಪ ಮಾತನಾಡಿ, ಗ್ರಾಮೀಣ ಭಾಗದ ಕೆಲವು ಭಾಗದಲ್ಲಿ ಬೆಳಗ್ಗೆ 6ಕ್ಕೆ ಮದ್ಯದ ಅಂಗಡಿಗಳು ತೆರೆದಿರುತ್ತವೆ. ಇದರಿಂದ ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಾರೆ. ಅಬಕಾರಿ ಇಲಾಖೆಯವರು ಇಂತಹ ಮದ್ಯದ ಅಂಗಡಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಡಿ.ವೈ.ಎಸ್.ಪಿ ಚಂದ್ರಶೇಖರ್, ಕೊಪ್ಪ ಡಿ.ವೈ.ಎಸ್.ಪಿ ಜಹಗೀರ್‍ದಾರ್ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಡಿ.ರೇವಣ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News