ಮಡಿಕೇರಿ ಗುಂಡಿನ ದಾಳಿ ಪ್ರಕರಣ: ಮೂವರ ಬಂಧನ

Update: 2018-07-31 18:07 GMT

ಮಡಿಕೇರಿ, ಜು.31: ಮಡಿಕೇರಿ ನಗರದ ಫೀ.ಮಾ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯ ಮನೆಯೊಂದರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಾರುಕಟ್ಟೆ ಬಳಿಯ ಬಾರ್‍ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲೋಕೇಶ್, ಅಕ್ರಂ ಹಾಗೂ ಇವರ ಸ್ನೇಹಿತ ಕಿಶೋರ್ ಎಂಬುವವರೆ ಬಂಧಿತ ಆರೋಪಿಗಳು. ಸೋಮವಾರ ಮುಂಜಾನೆ ನಗರದ ಫೀ.ಮಾ.ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿನ ಜನಾರ್ಧನ ಎಂಬವರಿಗೆ ಸೇರಿದ ಮನೆಯ ಮೇಲೆ ಗುಂಡಿನ ದಾಳಿ ನಡೆದು, ಮನೆಯ ಕಿಟಕಿಯ ಗಾಜುಗಳು ಪುಡಿಯಾದ ಘಟನೆ ನಡೆದಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಅವರ ಮಾರ್ಗದರ್ಶನಲ್ಲಿ ಆರೋಪಿಗಳ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೋಲಿಸರು ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಾಳಿಗೆ ಕಾರಣ
ಮೂರು ತಿಂಗಳ ಹಿಂದೆ ಬಂಧಿತ ಆರೋಪಿ ಲೋಕೇಶ್ ಮತ್ತು ನಗರದ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆ ನಡೆಸುತ್ತಿರುವ ಮಹೇಶ್ ಎಂಬವರ ಸಹೋದರಿಯ ನಡುವೆ ಕಲಹ ನಡೆದು, ಲೋಕೇಶ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಮಹೇಶ್ ಬಗ್ಗೆ ಲೋಕೇಶ್‍ಗೆ ಆತಂಕವಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಬಂದೂಕಿನೊಂದಿಗೆ ಸ್ನೇಹಿತರಾದ ಅಕ್ರಂ ಹಾಗೂ ಕಿಶೋರ್ ಅವರೊಂದಿಗೆ ಕಾಲೇಜು ಹಿಂಭಾಗಕ್ಕೆ ಹೋದ ಲೋಕೇಶ, ಮಹೇಶನ ಮನೆ ಎಂದು ಭಾವಿಸಿ ಜನಾರ್ಧನ ಅವರ ಮನೆಗೆ ಗುಂಡು ಹಾರಿಸಿದ್ದ ಎಂದು ಹೇಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News