ಸಮ್ಮಿಶ್ರ ಸರ್ಕಾರ ಯಾವುದೇ ಅನುದಾನ ನೀಡದ ಪರಿಣಾಮ ಅಭಿವೃದ್ದಿ ಕಾರ್ಯಗಳಾಗುತ್ತಿಲ್ಲ: ಶಾಸಕ ರಾಮದಾಸ್

Update: 2018-08-01 12:33 GMT

ಗುಂಡ್ಲುಪೇಟೆ,ಅ.01: ರಾಜ್ಯದ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬಂದು ಬಜೆಟ್ ಮಂಡಿಸಿದ್ದರೂ ವಿಧಾನಸಭಾ ಸದಸ್ಯರಿಗೆ ಇನ್ನೂ ಯಾವುದೇ ಅನುದಾನ ನೀಡದ ಪರಿಣಾಮ ಹೊಸದಾಗಿ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಲ್ಲಿಸಿದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಕೇವಲ ಅಧಿಕಾರ ಹಿಡಿಯಲು ಮೈತ್ರಿ ಮಾಡಿಕೊಂಡು ರಚನೆಯಾದ ಸಮ್ಮಿಶ್ರ ಸರ್ಕಾರವು ಗೊಂದಲದ ಗೂಡಾಗಿದ್ದು, ಇನ್ನೂ ಟೇಕಾಫ್ ಆಗಿಲ್ಲ. ಸರ್ಕಾರ ಬಜೆಟ್ ಮಂಡಿಸಿದರೂ ಇನ್ನೂ ಅನುದಾನ ನೀಡದ ಕಾರಣ ಹಿಂದೆ ಇದ್ದ ಶಾಸಕರು ಬಳಕೆ ಮಾಡದ ಹಣವನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕಾಗಿದ್ದು, ಇದರಿಂದ ಹೆಚ್ಚಿನ ಅಭಿವೃದ್ದಿ ಸಾಧ್ಯವಾಗುತ್ತಿಲ್ಲ. ಸಾರಿಗೆ ಇಲಾಖೆಯಲ್ಲಿ ನಿವೃತ್ತರಾಗುವ ನೌಕರರಿಗೆ ಕೊಡಲು ಹಣವಿಲ್ಲವಾಗಿದ್ದು ಅವರ ಸೇವೆಯನ್ನು ಇನ್ನೂ ಎರಡು ವರ್ಷ ಮುಂದುವರೆಸುವ ಚಿಂತನೆಯಿದೆ ಎಂದರು.

ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ಅಭಿವೃದ್ದಿ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡದಿದ್ದರೂ ತಾನು ಕ್ಷೇತ್ರದಲ್ಲಿ ಸಂಚರಿಸಿ ಅಧಿಕಾರಿಗಳ ಸಭೆ ನಡೆಸಿ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆಗೆ ಶ್ರಮಿಸುತ್ತಿದ್ದೇನೆ. ಪಟ್ಟಣಕ್ಕೆ ಸರಬರಾಜಾಗುವ ನದಿ ನೀರನ್ನು ಮಾರ್ಗದ 34 ಹಳ್ಳಿಗಳಿಗೂ ಸರಬರಾಜು ಮಾಡುತ್ತಿರುವುದರಿಂದ ನೀರಿನ ಕೊರತೆಯಾಗುತ್ತಿದೆ. ಈ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಲ್ಲಿ ನೀರು ಸರಬರಾಜು ಮಾಡುವ ಮೂಲಕ ಪಟ್ಟಣಕ್ಕೆ ಇನ್ನೂ ಹೆಚ್ಚಿನ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಂಗಳದಲ್ಲಿ ನೀರಿನ ಸಂಗ್ರಹ ತೊಟ್ಟಿ ನಿರ್ಮಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಲಿಡಲೂ ಸಾಧ್ಯವಾಗದಂತ ರಸ್ತೆಗಳಿರುವ ಗ್ರಾಮಗಳಿಗೆ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಟಾನ ಮಾಡಲಾಗುತ್ತಿದ್ದು ಹಂತಹಂತವಾಗಿ ಎಲ್ಲಾ ಕೆರೆಗಳಿಗೂ ನದಿನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಮಂಡಲಾಧ್ಯಕ್ಷರಾಗಿ ಎನ್.ಮಲ್ಲೇಶ್ ಪದಗ್ರಹಣ:
ಎನ್.ಮಲ್ಲೇಶ್ ಅವರಿಗೆ ಪಕ್ಷದ ಬಾವುಟ ಹಸ್ತಾಂತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಜಾರಿಗೆ ತಂದಿರುವ ಉಜ್ವಲ್, ಜನಧನ್, ಇಂದ್ರಧನುಷ್, ಫಸಲ್ ಭೀಮಾ ಮುಂತಾದ ಯೋಜನೆಗಳ ಬಗ್ಗೆ ಮನೆಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡುವ ಮೂಲಕ ಕಾರ್ಯಕರ್ತರು ಮುಂದಿನ ಪುರಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ದೊರಕುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮೈಸೂರಿನ ಶಾಸಕ ನಾಗೇಂದ್ರ, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ಮಲ್ಲಿಕಾರ್ಜುನ, ಮೈಸೂರು ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನಿಲ್, ತಾಪಂ ಸದಸ್ಯರಾದ ಪ್ರಭಾಕರ್, ಆರ್.ಮಹೇಶ್, ಮುಖಂಡರಾದ ಸಿ.ಎಂ.ಶಿವಮಲ್ಲಪ್ಪ, ಎಂ.ಪುಟ್ಟರಂಗನಾಯಕ್, ಕೆ.ಆರ್.ಲೋಕೇಶ್, ರಾಜ್ಯ ಸಮಿತಿ ಸದಸ್ಯರಾದ ಹುಚ್ಚೇಗೌಡ, ಕೊಡಸೋಗೆ ಸಿದ್ದರಾಮಪ್ಪ ಸೇರಿದಂತೆ ಹಲವರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News