ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹ: ನಾಳೆಯ ಬಂದ್ ಸಂಪೂರ್ಣ ಗೊಂದಲಮಯ

Update: 2018-08-01 14:42 GMT

ಬೆಂಗಳೂರು, ಆ.1: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅ.2 ರಂದು ನಡೆಯಲಿರುವ ಉತ್ತರ ಕರ್ನಾಟಕ ಬಂದ್ ಸಂಪೂರ್ಣ ಗೊಂದಲಮಯವಾಗಲಿದೆ.

ಉತ್ತರ ಕರ್ನಾಟಕ ಪ್ರದೇಶ ಸಂಪೂರ್ಣ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯವಾಗಬೇಕು ಎಂದು ಆಗ್ರಹಿಸಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವಾರು ಮಠಾಧೀಶರು ಹಾಗೂ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಲಾಗಿದೆ. ಇದೇ ವೇಳೆ ನೂರಾರು ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ವಿದ್ಯಾರ್ಥಿ, ಯುವಜನ ಸಂಘಟನೆಗಳು ಪ್ರತ್ಯೇಕ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿ, ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿವೆ. ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿರುವ ಉತ್ತರ ಕರ್ನಾಟಕ ಹೋರಾಟಗಾರರೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಾಂತಿಯುತ ಮಾತುಕತೆ ನಡೆಸಿ ಭರವಸೆಗಳನ್ನು ನೀಡಿದ್ದಾರೆ. ಆದರೂ, ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಬಂದ್ ನಡೆಸಲು ತಯಾರಿ ನಡೆಸಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಹೇಳಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂದು ನೋಡಬೇಕಿದೆ.

ಪ್ರಾಣ ಹೋದರೂ ಬಂದ್ ವಾಪಸ್ ಪಡೆಯುವುದಿಲ್ಲ. ಬಂದ್‌ಗೆ 25 ಕ್ಕೂ ಅಧಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಯಾರು ಬೆಂಬಲ ಕೊಡಲಿ ಬಿಡಲಿ ನಾವು ಬಂದ್ ಮಾಡಿಯೇ ತೀರುತ್ತೇವೆ. ಬಂದ್‌ಗೆ ವಿರೋಧ ವ್ಯಕ್ತಪಡಿಸುವ ಸಂಘಟನೆಗಳಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಬೇಕಾಗಿಲ್ಲ ಎಂದು ಹರಿಹಾಯ್ದಿರುವ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ, ಬಂದ್ ಬಗ್ಗೆ ಯಾವುದೇ ಅನುಮಾನ ಬೇಡ, ಯಾರೂ ಇಂತಹ ವದಂತಿಗಳಿಗೆ ಕಿವಿಗೊಡದಿರಿ ಎಂದು ಹೇಳಿದ್ದಾರೆ.

ಎಲ್ಲೆಲ್ಲಿ ಬೆಂಬಲವಿದೆ/ಬೆಂಬಲವಿಲ್ಲ: ಬುಧವಾರ ನಡೆದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಗದಗ, ಬೀದರ್, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಬಂದ್‌ಗೆ ನೀಡಿದ್ದ ಬೆಂಬಲ ಹಿಂಪಡೆದಿದೆ ಎಂದು ವರದಿಯಾಗಿದ್ದು, ಹಾವೇರಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಬಂದ್ ಬದಲಿಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲು ಹೋರಾಟ ಸಮಿತಿ ನಿರ್ಣಯಿಸಿದೆ ಎಂದು ತಿಳಿದುಬಂದಿದೆ. 

ಒಡೆಯುವ ಕೆಲಸ ಬೇಡ
‘ಯಾರೂ ರಾಜ್ಯ ಒಡೆಯುವ ಕೆಲಸ ಮಾಡಬಾರದು. ನಾವೆಲ್ಲರೂ ಅಣ್ಣ-ತಮ್ಮಂದಿರ ರೀತಿಯಲ್ಲಿ ಒಟ್ಟಿಗೆ ಇರಬೇಕು. ಏನಾದರೂ ಸಮಸ್ಯೆಯಿದ್ದರೆ ಬಗೆಹರಿಸಿಕೊಂಡು ಮುಂದೆ ಸಾಗೋಣ. ಅಖಂಡ ಕರ್ನಾಟಕ ಎಂದೆಂದಿಗೂ ಒಟ್ಟಿಗೆ ಇರಬೇಕು. ಆದರೆ, ಪ್ರತ್ಯೇಕ ರಾಜ್ಯ ಬೇಕು ಎನ್ನುತ್ತಿರುವವರಿಗೆ ಬುದ್ಧಿ ಹೇಳುವಷ್ಟು ದೊಡ್ಡವನು ನಾನಲ್ಲ’
-ಶಿವರಾಜ್ ಕುಮಾರ್, ಚಲನಚಿತ್ರ ನಟ

ಪ್ರತ್ಯೇಕ ರಾಜ್ಯದಿಂದ ಪ್ರಯೋಜವಿಲ್ಲ
‘‘ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತಿರುವವರಿಗೆ ಸಮಗ್ರ ಕರ್ನಾಟಕದ ಇತಿಹಾಸ ಗೊತ್ತಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು ಹೊರತು ಪ್ರತ್ಯೇಕತೆಗಾಗಿ ಅಲ್ಲ. ಪ್ರತ್ಯೇಕ ರಾಜ್ಯದಿಂದ ಯಾವುದೇ ಪ್ರಯೋಜನವಾಗುವುದಿಲ್ಲ’’
-ಪ್ರಿಯಾಂಕ ಖರ್ಗೆ, ಸಮಾಜ ಕಲ್ಯಾಣ ಸಚಿವ

ಹಸ್ತಕ್ಷೇಪ ಸಲ್ಲ
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ವಿಷಯದಲ್ಲಿ ಸ್ವಾಮೀಜಿಗಳು ಭಾಗಿಯಾಗಿರುವುದು ಸರಿಯಲ್ಲ. ತಮ್ಮ ಮಠಗಳಿಗೆ ಅನುದಾನ ಹೆಚ್ಚಿಸಿಕೊಳ್ಳಲು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಧರ್ಮ ರಕ್ಷಣೆ ಬಿಟ್ಟು, ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ
-ಎಸ್.ಕೆ.ಬೆಳ್ಳುಬ್ಬಿ, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News