×
Ad

ಸಚಿವರಿಗೆ ಸಿದ್ದರಾಮಯ್ಯ ಔತಣಕೂಟ ಆಯೋಜನೆ: ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ

Update: 2018-08-01 20:22 IST

ಬೆಂಗಳೂರು, ಆ.1: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ ಬೆನ್ನಲ್ಲೆ, ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಸಚಿವರಿಗೆ ಬುಧವಾರ ರಾತ್ರಿ ಔತಣಕೂಟ ಆಯೋಜಿಸಿದ್ದು, ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿಗಳ ನೇಮಕ ಸಂದರ್ಭದಲ್ಲಿ ಸಿದ್ದರಾಮಯ್ಯ ಅಭಿಪ್ರಾಯಕ್ಕೆ ಮುಖ್ಯಮಂತ್ರಿ ಮನ್ನಣೆ ನೀಡಿಲ್ಲ ಎನ್ನಲಾಗುತ್ತಿದೆ. ಬೆಂಗಳೂರು ಉಸ್ತುವಾರಿಯನ್ನು ತಮ್ಮ ಆಪ್ತ ಕೆ.ಜೆ.ಜಾರ್ಜ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಸಾ.ರಾ.ಮಹೇಶ್‌ಗೆ ನೀಡುವಂತೆ ಅವರು ಅಭಿಪ್ರಾಯಪಟ್ಟಿದ್ದರು. ಆದರೆ, ಬೆಂಗಳೂರು ಉಸ್ತುವಾರಿಯನ್ನು ಡಾ.ಜಿ.ಪರಮೇಶ್ವರ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ ಜಿ.ಟಿ.ದೇವೇಗೌಡಗೆ ನೀಡುವ ಮೂಲಕ ಕುಮಾರಸ್ವಾಮಿ, ಅವರ ಮಾತನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಬಲಶಾಲಿಯಾಗಿರುವ ಜಿಲ್ಲೆಗಳಿಗೆ ಜೆಡಿಎಸ್ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬೀದರ್, ಬಿಜಾಪುರ, ರಾಯಚೂರು, ದಾವಣಗೆರೆ ಜಿಲ್ಲೆಗಳಿಗೆ ಜೆಡಿಎಸ್ ಸಚಿವರನ್ನು ನೇಮಕ ಮಾಡಿರುವುದು ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ ಎಂದು ತಿಳಿದು ಬಂದಿದೆ.

ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹೆಚ್ಚು ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ಆ ಜಿಲ್ಲೆಗೆ ಬಂಡೆಪ್ಪ ಕಾಶೆಂಪೂರ್ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್‌ನ ಭದ್ರಕೋಟೆ ದಾವಣಗೆರೆ ಜಿಲ್ಲೆಗೆ ಎಸ್.ಆರ್.ಶ್ರೀನಿವಾಸ್(ವಾಸು) ಅವರನ್ನು ನೇಮಕ ಮಾಡಲಾಗಿದೆ.

ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದರು. ಇದೇ ಮೊದಲ ಬಾರಿಗೆ ಸಚಿವರಿಗಾಗಿ ಪ್ರತ್ಯೇಕವಾಗಿ ಔತಣಕೂಟವನ್ನು ಏರ್ಪಡಿಸಿರುವುದು ಕುತೂಹಲಕಾರಿಯಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ಅಣತಿಯಂತೆ ನಡೆಯುತ್ತಿದ್ದಾರೆ ಎಂಬ ಅಸಮಾಧಾನ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿದೆ.

ನಿಗಮ, ಮಂಡಳಿಗಳ ನೇಮಕಾತಿ, ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ಬೇಡಿಕೆಗೆ ಮಾನ್ಯತೆ ಸಿಗುತ್ತಿಲ್ಲ. ಜೆಡಿಎಸ್‌ನ ಪ್ರಭಾವಿ ಸಚಿವರು ವರ್ಗಾವಣೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಔತಣಕೂಟದಲ್ಲಿ ಈ ಎಲ್ಲ ವಿಚಾರಗಳು ಚರ್ಚೆಗೊಳಪಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News