ಭಾರತೀಯ ಶಿಕ್ಷಣ ವ್ಯವಸ್ಥೆ ಬದಲಾಗಬೇಕು: ಪ್ರೊ.ಸಿ.ಎನ್.ಆರ್.ರಾವ್

Update: 2018-08-01 16:28 GMT

ಮೈಸೂರು,ಆ.1: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕು ಎಂದು ಭಾರತರತ್ನ ಪ್ರೊ.ಸಿ.ಎನ್ ಆರ್.ರಾವ್ ಅಭಿಪ್ರಾಯಿಸಿದರು.

ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ನಡೆದ  56ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ದೇಶದ ಪ್ರಜೆಯೇ ಆಗಿರಲಿ, ಪ್ರಧಾನಿಯೇ ಆಗಿರಲಿ, ಈಗಿರುವ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ, ಗುಣಮಟ್ಟದ ಶಿಕ್ಷಣ ನೀಡಿ ಎಲ್ಲ ಯುವಜನತೆಗೂ ಉದ್ಯೋಗಾವಕಾಶ ದೊರಕುವಂತೆ ಮಾಡಿದರೆ ನಮ್ಮ ದೇಶಕ್ಕೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೇನಿದೆ. ಶಿಕ್ಷಣ ಮಕ್ಕಳಿಗೆ ಹೊರೆಯಾಗಬಾರದು. ಅದು ಅವರಿಗೆ ಸಂತೋಷ ನೀಡಬೇಕು. ನಮ್ಮ ಕಾಲದಲ್ಲಿ ನಾವು ಶಿಕ್ಷಣವನ್ನು ಎಂಜಾಯ್ ಮಾಡುತ್ತಿದ್ದೆವು. ಈಗಿನ ಪರಿಸ್ಥಿತಿ ಹೇಗಿದೆ ಎಂದರೆ 80% ಫಲಿತಾಂಶ ಪಡೆದು ಖೋಟಾದಲ್ಲಿ ಸೀಟುಗಿಟ್ಟಿಸಿ ಹಗಲಿರುಳು ಓದಿ, ಎಕ್ಸ್ ಟ್ರಾ ಟ್ಯೂಷನ್ ತಗೊಂಡು ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಭಯಾನಕ ದುಃಸ್ಥಿತಿಗೆ ಮಕ್ಕಳು ತಲುಪಿದ್ದಾರೆ. ಹಾಗಾಗಿ ಶಿಕ್ಷಣ ಮಕ್ಕಳಿಗೆ ಹೊರೆಯಾಗಬಾರದು ಎಂದು ಹೇಳಿದರು.

ಶಿಕ್ಷಣವಿಂದು ಬಡವರ ಕೈಗೆ ಎಟುಕದ ಸಂಗತಿಯಾಗಿದೆ. ಭಾರತದಲ್ಲಿ ಶಿಕ್ಷಣ ಸೌಲಭ್ಯದ ಕೊರತೆಯಿದೆ. ಕ್ಯಾಂಬ್ರಿಡ್ಜ್ , ಆಕ್ಸ್ ಫರ್ಡ್ ಗಳಲ್ಲಿ ಮಕ್ಕಳಿಗೆ ಒಳ್ಳೆಯ ವೇದಿಕೆ ಇದೆ. ಇಲ್ಲಿ ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಗುತ್ತಿಲ್ಲ. ಶಿಕ್ಷಣಕ್ಕೆ ಮಹತ್ವ ನೀಡಿದರೆ ಅದಕ್ಕೆ ಒತ್ತು ನೀಡಿದರೆ ಒಳ್ಳೆಯ ಸಂಪನ್ಮೂಲವನ್ನು ಹುಟ್ಟು ಹಾಕಿದಂತೆ. ಇದರಿಂದ ಕಳೆದುಕೊಳ್ಳುವಂಥದೇನಿಲ್ಲ. ಅದಕ್ಕಾಗಿ ಒಳ್ಳೆಯ, ಗುಣಮಟ್ಟದ ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಮಾತನಾಡಿ, ಸಿಎನ್ ಆರ್ ರಾವ್ ದೇಶದ ಶಿಖರ ಪ್ರಾಯ ವ್ಯಕ್ತಿತ್ವದವರು. ಭಾರತ ವಿಜ್ಞಾನದ ವಿವೇಕವೆಂದರೂ ತಪ್ಪಾಗಲಾರದು. ಅವರ ಮಾತನ್ನು ಕೇಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಾನು ಋಣಿ. ಭಾರತರತ್ನ ಪಡೆದವರಲ್ಲಿಯೇ ರತ್ನಪ್ರಿಯರು. 78 ಡಾಕ್ಟರೇಟ್ ಪಡೆದ ಓರ್ವ ವಿದ್ವಾಂಸ ವಿಜ್ಞಾನಿಯನ್ನು ನೋಡಿದ್ದು ಇದೇ ಮೊದಲು. 78ರ ಮುಂದೆ ನನಗೆ ಸಿಕ್ಕ ನಾಲ್ಕು ಡಾಕ್ಟರೇಟ್ ಏನೇನೂ ಅಲ್ಲ ಎಂದರು. ಇಂದು ಭಾರತದಲ್ಲಿ ಶಿಕ್ಷಣವೊಂದು ಉದ್ಯಮವಾಗಿರುವುದರಿಂದ ವಿದ್ಯಾದಾನದ ಪ್ರಶ್ನೆ ಹೋಗಿ ವಿದ್ಯಾ ವ್ಯಾಪಾರದ ಸಂಸ್ಕೃತಿ ಬಂದಿರುವುದರಿಂದ ವಿದ್ಯಾದಾನದ ಕಲ್ಪನೆ ಎಂದೋ ಮರೆಯಾಗಿ ವಿದ್ಯಾವ್ಯಾಪಾರ, ವಿದ್ಯೆಯ ಉದ್ಯಮ ಹುಟ್ಟಿರುವುದರಿಂದ ಲಕ್ಷಾಂತರ ಬಡವರ ಮಕ್ಕಳು ಕೆಲವು ಶ್ರೀಮಂತರ ಮಕ್ಕಳ ನಡುವೆ ಅಂತರ ಬಂದು ಶಿಕ್ಷಣದಲ್ಲಿ ಒಂದು ವಿಚಿತ್ರ ರೀತಿಯ, ಅಮಾನವೀಯ ರೀತಿಯ ವರ್ಗ ವ್ಯವಸ್ಥೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಪ್ರೊ.ಸಿ.ಜಿ.ವೆಂಕಟೇಶ್ ಮೂರ್ತಿ, ಪ್ರೊ.ಎಸ್.ರಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News