ಸಾರ್ವಜನಿಕರಿಗೆ ತೊಂದರೆ ನೀಡಿದರೆ ಶಿಸ್ತುಕ್ರಮ: ಅಧಿಕಾರಿಗಳಿಗೆ ಡಿ.ಸಿ.ತಮ್ಮಣ್ಣ ಎಚ್ಚರಿಕೆ
ಮಂಡ್ಯ, ಆ.1: ಅಧಿಕಾರಿಗಳು ರೈತರು ಹಾಗೂ ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡದೇ ತೊಂದರೆ ನೀಡಿದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಸಿದ್ದಾರೆ.
ಮದ್ದೂರಿನ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ಭೂ ದಾಖಲೆ ಇಲಾಖೆಯವರು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದರು. ಸಾರ್ವಜನಿಕರ ಸರಳ ಕೆಲಸಗಳಿಗೆ ತೊಡಕು ಆಗದಂತೆ ಕೆಲಸನಿರ್ವಹಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು. ಅನಗತ್ಯವಾಗಿ ಕಚೇರಿಗೆ ಅಲೆಸಬಾರದು ಎಂದು ಅವರು ಸೂಚಿಸಿದರು.
ಸಾರ್ವಜನಿಕರು ಹಾಗೂ ರೈತರಿಂದ ಹೆಚ್ಚು ದೂರು ಬಂದ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರವಹಿಸಿಕೊಂಡ ಎರಡು ತಿಂಗಳಲ್ಲಿ ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಏರ್ಪಡಿಸಿ ಸಮಸ್ಯೆ ಆಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಮಾತನಾಡಿ, ಪ್ರಥಮ ಬಾರಿಗೆ ತಾಲೂಕು ಮಟ್ಟದ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಅಧಿಕಾರಿಗಳು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ವಿಳಂಬ ಮಾಡದೆ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಜನಸಂಪರ್ಕ ಸಭೆಯಲ್ಲಿ ಪ್ರಕೃತಿ ವಿಕೋಪದಡಿ ಮಳೆಯಿಂದ ಮನೆ ಹಾನಿಯಾದವರಿಗೆ ಸಹಾಯಧನ ಚೆಕ್ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ವೇತನ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಾರ್ವಜನಿಕರಿಂದ ದೂರಿನ ಸುರಿಮಳೆ:
ಜನಸಂಪರ್ಕ ಸಭೆ ವೇಳೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದರು. ಗೊರವನಹಳ್ಳಿ ರೈತ ಸುರೇಶ, ಪುನರ್ ಸರ್ವೇ ಕಾರ್ಯ ಮಾಡಲು ರಾಜಸ್ವ ನಿರೀಕ್ಷಕ ನಾಗರಾಜು 2 ಸಾವಿರ ಹಣ ಕೇಳುತ್ತಿದ್ದಾರೆ ಕೂಡಲೇ ಅವರನ್ನು ಅಮಾನತುಪಡಿಸಬೇಕೆಂದು ಒತ್ತಾಯಿಸಿದರು.
ಆತಗೂರು ಹೋಬಳಿಯಲ್ಲಿ ಪುನರ್ ಸರ್ವೆ ಆಗದ ಕಾರಣ ಸುಮಾರು 4 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಆತಗೂರಿನ ಶಂಕರ್ ದೂರಿದರು.
ಕೆ.ಎಂ.ದೊಡ್ಡಿ ನಾಡಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಉಪತಹಶೀಲ್ದಾರ್ ವೆಂಕಟೇಶ್ ಅವರು ಬೇಜವಾಬ್ಧಾರಿ ಪ್ರದರ್ಶಿಸುತ್ತಿದ್ದಾರೆ. ಸಂಧ್ಯಾ ಸುರಕ್ಷ ಯೋಜನೆ ಸೇರಿದಂತೆ ಯಾವುದೇ ಸರಕಾರಿ ಸವಲತ್ತುಗಳನ್ನು ನೀಡಲು ಸತಾಯಿಸುತ್ತಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಮೂರ್ತಿ, ಕರಡಕೆರೆ ಯೋಗೇಶ್ ಒತ್ತಾಯಿಸಿದರು.
ಸಚಿವರ ಪುತ್ರಿ ಮನವಿ:
ತನ್ನ ಅತ್ತೆ ಪದ್ಮಮ್ಮ ಅವರು ಹೆಸರಿನಲ್ಲಿ ಮೊಬ್ಬಳಗೆರೆ ಗ್ರಾಮದಲ್ಲಿರುವ ಜಮೀನಿನ ಖಾತೆ ಬದಲಾವಣೆ ಹಾಗೂ ಭೂಮಾಪನ ಕಾರ್ಯ ಮಾಡಿಕೊಡಲು ಕೋರಿ ತಮ್ಮ ತಂದೆ ಸಚಿವ ತಮ್ಮಣ್ಣ ಅವರಿಗೆ ಪುತ್ರಿ ಡಿ.ಟಿ.ಸಂಗೀತ ಸರತಿ ಸಾಲಿನಲ್ಲಿ ನಿಂತು ಮನವಿ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ವಿಜಯ್, ಉಪವಿಭಾಗಾಧಿಕಾರಿ ರಾಜೇಶ್, ಪ್ರಭಾರ ತಹಸೀಲ್ದಾರ್ ರೂಪ, ಎಡಿಎಲ್‍ಆರ್ ನಿರಂಜನ್, ಡಿಡಿಎಲ್‍ಆರ್ ಮಮತಾ, ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಸದಸ್ಯ ಮರಿಹೆಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ ಪುರಸಭಾ ಅಧ್ಯಕ್ಷೆ ಉಮಾ ಪ್ರಕಾಶ್, ಉಪಾಧ್ಯಕ್ಷೆ ಪಾರ್ವತಮ್ಮ ಶಂಕರ್, ತಾಪಂ ಸದಸ್ಯ ಚಿಕ್ಕಮರಿಯಪ್ಪ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಧಿಕಾರಿ ರಾಜೇಶ್, ತಹಸೀಲ್ದಾರ್ ಶಿವಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.