ಮಡಿಕೇರಿ: ಗಾಂಜಾ ಮಾರಾಟ; ಮಾಲು ಸಹಿತ ಆರೋಪಿ ಬಂಧನ
ಮಡಿಕೇರಿ, ಆ.1 : ವಿರಾಜಪೇಟೆಯ ಮೀನುಪೇಟೆ ಸಮೀಪವಿರುವ ರುದ್ರಭೂಮಿ ಗೇಟಿನ ಮುಂಭಾಗ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿರಾಜಪೇಟೆ ಪಟ್ಟಣ ಪೊಲೀಸರು ಮಾಲು ಸಹಿತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯ ಇರಿಟ್ಟಿ ನಿವಾಸಿಯಾದ ಮುಹಮದ್ ಆಲಿ ಎಂಬಾತನೇ ಬಂಧಿತ ಆರೋಪಿಯಾಗಿದ್ದು, ಈತನಿಂದ 25 ಸಾವಿರ ಮೌಲ್ಯದ 1 ಕೆ.ಜಿ. 150ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಮುಹಮದ್ ಆಲಿ ಹಲವು ಸಮಯಗಳಿಂದ ಮೀನುಪೇಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿರಾಜಪೇಟೆ ಪಟ್ಟಣ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಣ್ಣೇಕರ್ ಆದೇಶದಂತೆ ಡಿವೈಎಸ್‍ಪಿ ನಾಗಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಉಪನಿರೀಕ್ಷಕ ಸಂತೋಷ್ ಕಷ್ಯಪ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆ ತಹಶೀಲ್ದಾರ್ ಆರ್ ಗೋವಿಂದ ರಾಜು, ಕಂದಾಯ ನಿರೀಕ್ಷಕ ಪಳಂಗಪ್ಪ ಅವರ ಸಮ್ಮುಖದಲ್ಲಿ ಆರೋಪಿ ಮುಹಮದ್ ಆಲಿ ಬಳಿಯಿಂದ 1 ಕೆ.ಜಿ.50 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮಾರುಕಟ್ಟೆ ದರ 25 ಸಾವಿರ ರೂಪಾಯಿಗಳಾಗಿದ್ದು ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುನೀಲ್ ಸುಬ್ರಮಣಿ ಮುನೀರ್ ರಚನ್ ಕುಮಾರ್ ಸತೀಶ್ ಹಾಗೂ ವಾಹನ ಚಾಲಕ ಯೋಗೇಶ್ ಅವರುಗಳು ಪಾಲ್ಗೊಂಡಿದ್ದರು.