ಮಡಿಕೇರಿ: ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮೃತ್ಯು
ಮಡಿಕೇರಿ ಆ.1 : ಮನೆ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಕಬ್ಬಿಣದ ಕಂಬಿ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ ಪಟ್ಟಣದಲ್ಲಿ ನಡೆದಿದೆ.
ರಾಯಚೂರಿನ ವರುಣಕೋಡು ಗ್ರಾಮದ ಯಮನೂರು (25) ಮೃತ ಕಾರ್ಮಿಕ. ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಎದುರಿನಲ್ಲಿ ರಾಧಾಕೃಷ್ಣ ಎಂಬವರಿಗೆ ಸೇರಿದ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಕಬ್ಬಿಣದ ಕಂಬಿಯನ್ನು ಮೇಲೆತ್ತುವಾಗ ಮೇಲೆ ಹಾದು ಹೋಗಿದ್ದ 11 ಕೆ. ವಿ. ವಿದ್ಯುತ್ ತಂತಿಗೆ ಕಂಬಿ ತಗುಲಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮನೆ ಸಮೀಪ ನೆಲದಿಂದ ಕೇವಲ 20 ಅಡಿಗಳಷ್ಟು ಎತ್ತರದಲ್ಲಿ 11 ಕೆ. ವಿ. ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎತ್ತರದಲ್ಲಿ ತಂತಿ ಹಾದು ಹೋಗಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಸ್ಥಳೀಯ ಗ್ರಾಮ ಪಂಚಾಯತ್ ಕೂಡಾ ಈ ಬಗ್ಗೆ ಗಮನಹರಿಸಿಲ್ಲ. ಮನೆ ಕಟ್ಟಲು ಅನುಮತಿ ನೀಡುವಾಗ ಪರಿಶೀಲನೆ ನಡೆಸಬೇಕಿತ್ತು ಎಂಬ ಆರೋಪ ವ್ಯಕ್ತವಾಗಿದೆ.
ಶವವನ್ನು ಗೋಣಿಕೊಪ್ಪ ಸಮುದಾಯ ಕೇಂದ್ರದ ಶವಗಾರದಲ್ಲಿ ಇಡಲಾಗಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಸ್ಥಳಕ್ಕೆ ಸೆಸ್ಕ್ ಜೆಇ ಕೃಷ್ಣಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.