×
Ad

ಶಿವಮೊಗ್ಗ: ಸರ್ಕಾರಿ ಶಾಲೆಯ ಕಸ ಗುಡಿಸಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ

Update: 2018-08-01 22:48 IST

ಶಿವಮೊಗ್ಗ, ಜು. 1: ತಾಲೂಕಿನ ಹೊಳಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ಬುಧವಾರ ತಾಲೂಕು ಪಂಚಾಯತ್ ಆಡಳಿತ ಹಮ್ಮಿಕೊಂಡಿದ್ದ 'ಸ್ವಚ್ಚ ಸರ್ವೇಕ್ಷಣ' ಕಾರ್ಯಕ್ರಮಕ್ಕೆ ಶಾಸಕ ಕೆ.ಬಿ.ಅಶೋಕ್‍ ನಾಯ್ಕ್ ರವರು ಶಾಲಾ ಆವರಣದ ಕಸ ಗುಡಿಸುವ ಮೂಲಕ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಹೊಳಲೂರು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ.ಕಾಂತೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಅತೀಕ್ ಪಾಷ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನೀತ, ಉಪಾಧ್ಯಕ್ಷ ಇಮ್ರಾನ್‍ ಖಾನ್, ಪಿಡಿಓಗಳಾದ ಪ್ರೇಮ, ಲೋಕೇಶ್ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

ಶಾಸಕರು ಗಿಡಗಂಟೆ ಕೀಳುವ ಕೆಲಸ ಆರಂಭಿಸುತ್ತಿದ್ದಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಊರಿನ ಮುಖಂಡರು ಕೂಡ ಶಾಸಕರ ಜೊತೆ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದರು. ಕೆಲ ನಿಮಿಷಗಳ ಕಾಲ ಗಣ್ಯರು ಶ್ರಮದಾನ ನಡೆಸಿದರು. ತದನಂತರ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. 

ಸ್ವಚ್ಚತೆ ಮುಖ್ಯ: 'ಅಸ್ವಚ್ಚತೆ, ಅನೈರ್ಮಲ್ಯತೆಯಿಂದ ಹತ್ತು ಹಲವು ಕಾಯಿಲೆಗಳು ಹರಡುತ್ತವೆ. ಪರಿಸರ ಕೂಡ ಮಲಿನವಾಗುತ್ತದೆ. ಪ್ರತಿವರ್ಷ ಸಾವಿರಾರು ಜನರು ನಾನಾ ರೀತಿಯ ರೋಗಗಳಿಗೆ ತುತ್ತಾಗುವಂತಾಗಿದೆ. ಈ ಕಾರಣದಿಂದ ಮನೆಯೊಳಗೆ ಹಾಗೂ ಹೊರಗೆ ಸ್ವಚ್ಚ ವಾತಾವರಣವಿಟ್ಟುಕೊಳ್ಳುವತ್ತ ಪ್ರತಿಯೋರ್ವರು ಗಮನಹರಿಸಬೇಕು' ಎಂದು ಶಾಸಕ ಕೆ.ಬಿ.ಅಶೋಕ್‍ ನಾಯ್ಕ್ ತಿಳಿಸಿದರು. 

ದೇಶದಲ್ಲಿ ಸ್ವಚ್ಚತೆಯ ಕುರಿತಂತೆ ಜನಜಾಗೃತಿ ಮೂಡಿಸುವ ಉದ್ದೇಶದಿಂದಲೇ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶಾದ್ಯಂತ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ವತಃ ಅವರೇ ಸ್ವಚ್ಚತೆಯ ಶ್ರಮದಾನದಲ್ಲಿ ಭಾಗಿಯಾದರು. ಪ್ರಧಾನಿಯವರ ಈ ಕ್ರಮಕ್ಕೆ ದೇಶಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದರು. 

ಪ್ರಸ್ತುತ ಸ್ವಚ್ಚತ ಕಾರ್ಯಕ್ಕಾಗಿಯೇ ಸರ್ಕಾರಗಳು ಕೋಟ್ಯಾಂತರ ರೂ. ವ್ಯಯಿಸುತ್ತಿವೆ. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಕೂಡ ನೀಡಲಾಗುತ್ತಿದೆ. ಶೌಚಾಲಯ ವ್ಯವಸ್ಥೆಯಿಲ್ಲದವರು ಸರ್ಕಾರದ ಅನುದಾನ ಪಡೆದು, ಶೌಚಾಲಯ ನಿರ್ಮಿಸಿಕೊಳ್ಳಬೇಕು. ಪರಿಸರ ಮಾಲಿನ್ಯವಾಗದಂತೆ ಎಚ್ಚರವಹಿಸಬೇಕು ಎಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News