ಚಿಕ್ಕಮಗಳೂರು: ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಧರಣಿ

Update: 2018-08-01 17:33 GMT

ಚಿಕ್ಕಮಗಳೂರು, ಆ.1: ಶೀರೂರು ಲಕ್ಷ್ಮೀವರ ಸ್ವಾಮೀಜಿ ಸಾವಿನ ಪ್ರಕರಣದ ತನಿಖೆ ವಿಳಂಬ ಹಾಗೂ ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಘಟನೆಗಳನ್ನು ಖಂಡಿಸಿ ಜಿಲ್ಲೆಯ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಬುಧವಾರ ನಗರದ ಆಜಾದ್ ಪಾರ್ಕ್ ಆವರಣದಲ್ಲಿ ಧರಣಿ ನಡೆಸಿದರು.

ಒಕ್ಕೂಟದ ಮುಖಂಡರಾದ ಗೌಸ್ ಮೊಹಿದ್ದೀನ್, ವಸಂತ, ಕೃಷ್ಣಮೂರ್ತಿ, ರಾಜರತ್ನಂ, ಚಂದ್ರಪ್ಪ, ಬಾಲಕೃಷ್ಣ ಮತ್ತಿತರೊಂದಿಗೆ ಒಕ್ಕೂಟದ ನೂರಾರು ಕಾರ್ಯಕರ್ತರು ಬುಧವಾರ ಬೆಳಗ್ಗೆ ನಗರದ ಆಜಾದ್ ಪಾರ್ಕ್ ಆವರಣದಲ್ಲಿ ಸಮಾವೇಶಗೊಂಡು ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಘಟನೆ ಹಾಗೂ ಶೀರೂರು ಸ್ವಾಮೀಜಿ ಸಾವಿನ ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಆರ್ಯ ಸಮಾಜಸ ಸ್ವಾಮಿ ಅಗ್ನಿವೇಶ್ ಅವರು ದಲಿತರು, ಆದಿವಾಸಿಗಳ ಬಗ್ಗೆ ಕಾಳಜಿ ಹೊಂದಿದವರು. ಅವರು ಇತ್ತೀಚೆಗೆ ಜಾರ್ಖಂಡ್‍ನಲ್ಲಿ ಆದಿವಾಸಿಗಳ ಜಮೀನುಗಳನ್ನು ಸರಕಾರ ಕಿತ್ತುಕೊಳ್ಳುವುದರ ವಿರುದ್ಧದ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಸಂಘ ಪರಿವಾರದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಲ್ಲಿನ ಸರಕಾರ ಈ ಘಟನೆಯನ್ನು ನಿರ್ಲಕ್ಷಿಸಿದ್ದು, ಆರೋಪಿಗಳನ್ನು ರಕ್ಷಿಸುವ ಹುನ್ನಾರ ನಡೆಸುತ್ತಿದೆ. ಹಲ್ಲೆ ಆರೋಪಿಗಳು ಸಂಘಪರಿವಾರದವರಾಗಿರುವ ಕಾರಣ ಸರಕಾರ ಅವರ ರಕ್ಷಣೆಗೆ ನಿಂತಿದೆ ಎಂದು ಆರೋಪಿಸಿದ ಧರಣಿ ನಿರತರು, ಬಡ ಜನರ ಬಗ್ಗೆ ಧ್ವನಿ ಎತ್ತುವ ಸಾಮಾಜಿಕ ಕಳಕಳಿ ಹೊಂದಿದವರಿಗೆ ರಕ್ಷಣೆ ನೀಡಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಉಡುಪಿಯ ಶೀರೂರಿನಲ್ಲಿ ಇತ್ತೀಚೆಗೆ ನಿಗೂಢವಾಗಿ ಸಾವಿಗೀಡಾದ ಲಕ್ಷ್ಮೀವರ ಸ್ವಾಮೀಜಿ ಸಾವಿನ ಹಿಂದೆ ದೊಡ್ಡ ರಹಸ್ಯವಿದ್ದು, ಇದರ ತನಿಖೆಯನ್ನು ಯಾವುದೇ ಒತ್ತಡಗಳಿಗೆ ಮಣಿಯದೇ ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕೆಂದರು.

ನಂತರ ಈ ಸಂಬಂಧದ ಮನವಿಯನ್ನು ಮುಖಂಡರು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News