ಬಾಗೇಪಲ್ಲಿ: ಬಸ್ ಹರಿದು ಯುವಕ ಸ್ಥಳದಲ್ಲೇ ಮೃತ್ಯು
ಬಾಗೇಪಲ್ಲಿ,ಆ.02: ಖಾಸಗಿ ಬಸ್ಸೊಂದು ಯುವಕನ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಟ್ಟಣಕ್ಕೆ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿ 7ರ ಸುಂಕಲಮ್ಮ ದೇವಾಸ್ಥಾನದ ಬಳಿ ಬುಧವಾರ ರಾತ್ರಿ ನಡೆದಿದೆ.
ಆಂಧ್ರಪ್ರದೇಶದ ಹಿಂದೂಪುರ ನಿವಾಸಿ ಮಹಮದ್ ಮುಸ್ತಾಫ್(19) ಮೃತಪಟ್ಟಿರುವ ಯುವಕ ಎಂದು ಗುರುತಿಸಲಾಗಿದೆ.
ಮೃತ ಮುಹಮ್ಮದ್ ಮುಸ್ತಾಫ್ ಮತ್ತು ಹರ್ಷದ್ ಎಂಬುವವರು ಬುಧವಾರ ಬೆಳಗ್ಗೆ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ರಾತ್ರಿ ಬೆಂಗಳೂರಿನಿಂದ ರಾ.ಹೆ.7 ರ ಮೂಲಕ ಆಂಧ್ರಪ್ರದೇಶದ ಗೋರಂಟ್ಲಗೆ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಚಕ್ರ ಪಂಕ್ಚರ್ ಆಗಿದೆ. ನಂತರ ಸಂಕಲಮ್ಮ ದೇವಾಲಯದ ಪಕ್ಕದಲ್ಲಿರುವ ಅಂಗಡಿಯಲ್ಲಿ ಪಂಕ್ಚರ್ ಹಾಕಿಸಿಕೊಂಡು ಕಾರು ಇರುವ ಸ್ಥಳಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪರಗೋಡು ಗ್ರಾಮದ ಬಳಿ ಬೆಂಗಳೂರು ಕಡೆಯಿಂದ ಅತೀ ವೇಗವಾಗಿ ಬಂದ ಖಾಸಗಿ ಬಸ್ ಮುಹಮದ್ ಮುಸ್ತಾಫ್‍ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮುಸ್ತಾಫ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತನ ಜೊತೆಯಲ್ಲಿದ್ದ ಹರ್ಷದ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ನಂತರ ಬಸ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಬಾಗೇಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.