2 ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರಿನ ಮಹಿಳೆ ರಾಜ್ಯಕ್ಕೆ ವಾಪಸ್

Update: 2018-08-02 15:35 GMT

ಬೆಂಗಳೂರು, ಆ. 2: ಎರಡು ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿದ್ದ ಮೈಸೂರು ಜಿಲ್ಲೆಯ ಮಹಿಳೆ ಇಂದು ನಗರಕ್ಕೆ ಹಿಂದಿರುಗಿದ್ದಾರೆ.

ಪತಿಯಿಂದ ಪರಿತ್ಯಕ್ತಳಾಗಿ ಮಾನಸಿಕ ಆಘಾತಕ್ಕೊಳಗಾಗಿದ್ದ ಮಹಿಳೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಪತ್ತೆಯಾಗಿದ್ದರು. ನಂತರ ಎರಡು ವರ್ಷಗಳಿಂದ ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಮಹಿಳೆಯನ್ನು ರಾಜ್ಯಕ್ಕೆ ವಾಪಸ್ ಕರೆತರಲು ಹಾಗೂ ಸೂಕ್ತ ಚಿಕಿತ್ಸೆ ಮತ್ತು ಆಶ್ರಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ಶಿಮ್ಲಾಕ್ಕೆ ತೆರಳಿದ ತಂಡ ಮಹಿಳೆಯನ್ನು ವಾಪಸ್ ಕರೆತಂದಿದ್ದು, ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಹಿಳೆಯನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ, ಮಹಿಳೆಯನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ಕಾಳಜಿಯನ್ನು ಶ್ಲಾಘಿಸಿದ್ದಾರೆ.

ರಾಜ್ಯಕ್ಕೆ ಹಿಂದಿರುಗುತ್ತಿರುವ ಮಹಿಳೆಯನ್ನು ಶೀಘ್ರವೇ ಭೇಟಿ ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿ, ಕೂಡಲೇ ಆಕೆ ಹಿಂದಿರುಗಲು ವ್ಯವಸ್ಥೆ ಮಾಡಿದ ಮೈಸೂರು ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಮಹಿಳೆಯ ಮುಂದಿನ ಜೀವನಕ್ಕೆ ಅಗತ್ಯ ನೆರವು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News