ಯಾವುದೇ ಕಾರಣಕ್ಕೂ ಉ.ಕ ಪ್ರತ್ಯೇಕ ರಾಜ್ಯ ಮಾಡಬಾರದು: ಸಾಹಿತಿ ಸಿ.ಪಿ.ಕೃಷ್ಣಕುಮಾರ್
ಮೈಸೂರು,ಆ.2: ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬಾರದು ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಒತ್ತಾಯಿಸಿದರು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರು ಗಾಂಧಿ ಪ್ರತಿಮೆ ಬಳಿ ಗುರುವಾರ ಮೈಸೂರು ಜಿಲ್ಲಾ ಕನ್ನಡ ಚಳುವಳಿಗಾರರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಖಂಡ ಕರ್ನಾಟಕವನ್ನ ಒಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದು ಖಂಡನೀಯ ಮತ್ತು ರಾಜಕೀಯ ಭಂಡತನವಾದದ್ದು, ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯ ಮಾಡಬಾರದು. ಅಖಂಡ ಕರ್ನಾಟಕ ನಿರ್ಮಾಣ ಮಾಡಲು ಬಹಳಷ್ಟು ಮಂದಿ ತ್ಯಾಗ ಮಾಡಿದ್ದಾರೆ ಎಂಬುದನ್ನ ಸ್ಮರಿಸಿಕೊಳ್ಳಬೇಕಾಗಿದೆ. ಕನ್ನಡ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಬಿ.ಎಂ ಶ್ರೀಕಂಠಯ್ಯನವರು ಸೇರಿದಂತೆ ಹಲವಾರು ಮಂದಿ ಅಖಂಡ ಕರ್ನಾಟಕ ನಿರ್ಮಾಣಕ್ಕಾಗಿ ಹೋರಾಡಿದ್ದರು. ಈಗ ಅಖಂಡ ಕರ್ನಾಟಕವನ್ನ ಒಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಇದು ಖಂಡನೀಯ ಮತ್ತು ರಾಜಕೀಯ ಭಂಡತನವಾದದ್ದು ಎಂದು ಪ್ರತ್ಯೇಕ ರಾಜ್ಯದ ಬಗ್ಗೆ ಹೋರಾಟ ಮಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರ ಕವಿ ಕುವೆಂಪು ಲೇಖನಿಯ ಮೂಲಕ ಕರ್ನಾಟಕವನ್ನ ಕಟ್ಟುವುದಕ್ಕಾಗಿ ಕ್ರೀಯಾಶೀಲರಾಗಿದ್ದರು. ಇಂತಹ ಅಖಂಡ ಕರ್ನಾಟಕವನ್ನ ಒಡೆಯವುದು ಹಾಸ್ಯಸ್ಪದ ವಿಷಯ. ಪ್ರತ್ಯೇಕ ರಾಜ್ಯವಾದ ಕೂಡಲೇ ಅಭಿವೃದ್ದಿಯಾಗುತ್ತದೆ ಎಂಬ ಭರವಸೆ ಏನು ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಾಗಿಲ್ಲವೆಂಬುದು ಚರ್ಚೆಯ ವಿಷಯವೇ ಆಗಿದೆ. ಆದ್ದರಿಂದ ಕರ್ನಾಟಕದ ಐಕ್ಯತೆಗಾಗಿ, ಅಖಂಡತೆಗಾಗಿ ಧನಿ ಎತ್ತಿ ಹೋರಾಡುತ್ತಿದ್ದೇವೆ. ಅಖಂಡತೆಯ ಸಂದೇಶವನ್ನು ನಾವು ಮೊಳಗಿಸುತ್ತಿದ್ದೇವೆ. ಕರ್ನಾಟಕ ಎಂದೆಂದಿಗೂ ಒಂದಾಗಿರಲಿ, ಯಾವ ಕಾರಣಕ್ಕೂ ಒಡೆದು ಚೂರಾಗುವುದು ಬೇಡ. ನಾವೆಲ್ಲಾ ಒಂದು, ಕರ್ನಾಟಕ ಒಂದು ಅನ್ನುವುದು ನಮ್ಮ ದೃಢವಾದ ಘೋಷಣೆ ಎಂದರು.
ಪ್ರತಿಭಟನೆಯಲ್ಲಿ ಮೈಸೂರು ಕನ್ನಡ ಚಳುವಳಿಗಾರರ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಬಸವರಾಜು, ಸೋನಹಳ್ಳಿ ತುಂಗಾ, ದೂರ ಸುರೇಶ್, ಬಾಬು, ನಂಜನಗೂಡು ಜಯಕುಮಾರ್, ಕಿರಣ್ ವೀರನಗೆರೆ ಕುಮಾರ್ ಅಜಯ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.