×
Ad

ಮಂಡ್ಯ: ಕರ್ನಾಟಕ ಪ್ರತ್ಯೇಕತೆ ಕೂಗು ಖಂಡಿಸಿ ಕರವೇ ಪ್ರತಿಭಟನೆ

Update: 2018-08-02 22:30 IST

ಮಂಡ್ಯ, ಆ.2: ಅಖಂಡ ಕರ್ನಾಟಕ ವಿಭಜನೆ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಪ್ರತ್ಯೇಕ ಉತ್ತರ ಕರ್ನಾಟಕ ಪರ ಹೇಳಿಕೆ ನೀಡಿರುವ ಶಾಸಕ ಶ್ರೀರಾಮುಲು ಹಾಗೂ ಕೆಲ ಸ್ವಾಮೀಜಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಹೇಳಿಕೆ ನೀಡದಂತೆ ತಾಕೀತು ಮಾಡಿದರು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವ ಮೂಲಕ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ವರದಿ ಪ್ರಕಾರ ಹಿಂದುಳಿದಿರುವ 119 ತಾಲೂಕುಗಳ ಶಿಕ್ಷಣ, ಉದ್ಯೋಗ, ಉದ್ದಿಮೆ, ಕೃಷಿ, ಆರೋಗ್ಯ ಸೇವೆ, ಇತರ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಖಂಡ ಕರ್ನಾಟಕದ ಉಳಿವು ಕನ್ನಡಿಗರ ಜವಾಬ್ದಾರಿಯಾಗಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಾಡಿನಲ್ಲಿ ಐಕ್ಯತೆಯ ಧ್ವನಿ ಮೊಳಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ಎಂ.ಎಸ್.ಚಿದಂಬರ್, ಸಭಾಗ್ಯ ಮಹದೇವು, ಭಾರತಿ ಕುಮಾರ್, ರಮೇಶ್, ಸೌಭಾಗ್ಯ, ಮದ್ದೂರು ಅಶೋಕ್, ಬೋರೇಗೌಡ, ಎಂ.ಸುರೇಶ, ಪುಟ್ಟಮಲ್ಲಯ್ಯ, ಭಾಸ್ಕರ್, ವೇಣು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News