ಕಾಫಿ ಖರೀದಿಸಿ ಕೋಟ್ಯಂತರ ರೂ. ಪಂಗನಾಮ: ಆರೋಪ

Update: 2018-08-02 17:50 GMT

ಮೂಡಿಗೆರೆ, ಆ.2: ಸ್ಥಳೀಯ ಕಾಫಿ ಬೆಳೆಗಾರರಿಂದ ಕೋಟ್ಯಂತರ ರೂ. ಬೆಲೆಯ ಕಾಫಿ ಖರೀದಿಸಿ ಹಣ ನೀಡದೇ ಪಂಗನಾಮ ಹಾಕಿರುವ ಘಟನೆ ತಾಲೂಕಿನ ಬಸ್ಕಲ್ ಗ್ರಾಮದಲ್ಲಿ ವರದಿಯಾಗಿದೆ. 

ಮೂಡಿಗೆರೆ ತಾಲೂಕಿನ ಬಸ್ಕಲ್ ಗ್ರಾಮದ ಎಂ.ಜೆ.ರಘು ಎಂಬಾತ ಹಲವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಕಾಫಿ ಖರೀದಿ ಮಾಡಿ ಪಂಗನಾಮ ಹಾಕಿದ್ದಾರೆಂದು ಆರೋಪಿಸಲಾಗಿದ್ದು, ವ್ಯಾಪಾರಿ ಎಂ.ಜೆ.ರಘು ತಾಲೂಕಿನ ಬಸ್ಕಲ್‍ನಲ್ಲಿ ಎಂಜೆಆರ್ ಕಾಫಿ ಲಿಂಕ್ಸ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದ್ದು, ಈತ ಇತ್ತೀಚೆಗೆ ಬಸ್ಕಲ್ ಗ್ರಾಮದ ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿದ್ದು, ಇದುವರೆಗೂ ಹಣ ನೀಡಿಲ್ಲ ಎಂದು ಬೆಳೆಗಾರರು ಆರೋಪಿಸಿದ್ದಾರೆ. ಇದಲ್ಲದೇ ಅದೇ ಗ್ರಾಮದ ಕೆಲವರಿಂದ ಮೆಣಸು ಖರೀದಿಸಿ ಹಣ ನೀಡದೆ ಪರಾರಿಯಾಗಿದ್ದಾರೆನ್ನಲಾಗಿದ್ದು, ಕೆಲ ಬೆಳೆಗಾರರಿಗೆ ಚೆಕ್ ಕೊಟ್ಟಿದ್ದು, ಈ ಚೆಕ್‍ಗಳು ಬ್ಯಾಂಕಿನಲ್ಲಿ ಹಣವಿಲ್ಲದೆ ಬೌನ್ಸ್ ಆಗಿವೆ ಎಂದು ಆರೋಪಿಸಲಾಗಿದೆ.

ಕಳೆದ 2 ತಿಂಗಳ ಹಿಂದೆ ಈತನಿಂದ ಅನ್ಯಾಯವಾಗಿರುವ ಬಗ್ಗೆ ಕಾಫಿ ಬೆಳೆಗಾರರು ಮೂಡಿಗೆರೆ ಠಾಣೆಯಲ್ಲಿ ದೂರು ನೀಡಿದ್ದ ಸಂದರ್ಭದಲ್ಲಿ ಪೊಲೀಸರು  ರಘುವನ್ನು ಕರೆಸಿ ವಿಚಾರಣೆ ನಡೆಸಿದಾಗ 2 ತಿಂಗಳಲ್ಲಿ ತನ್ನ ಹೆಸರಿನಲ್ಲಿರುವ ಜಾಗವನ್ನು ಮಾರಿ ಹಣ ಕಟ್ಟುವುದಾಗಿ ತಿಳಿಸಿದ್ದ ಎನ್ನಲಾಗುತ್ತಿದ್ದು, ನಂತರ ತನ್ನ ಹೆಸರಿನಲ್ಲಿದ್ದ ಜಾಗವನ್ನು ತನ್ನ ಮಗ ಮತ್ತು ಹೆಂಡತಿ ಹೆಸರಿಗೆ ರಿಜಿಸ್ಟರ್ ಮಾಡಿದ್ದಾನೆಂದು ತಿಳಿದು ಬಂದಿದೆ. 

ಎಂ.ಜೆ.ರಘು 140 ಕ್ಕೂ ಅಧಿಕ ಬೆಳೆಗಾರರಿಗೂ ಅಂದಾಜು ಎಂಟು ಕೋಟಿಗೂ ಅಧಿಕ ಹಣವನು ನೀಡಬೇಕಾಗಿದೆ ಎನ್ನಲಾಗುತ್ತಿದೆ. ಬೆಳೆ ಬೆಳೆದು ಅತ್ತ ಬೆಳೆಯೂ ಇಲ್ಲದೆ ಹಣವೂ ಇಲ್ಲದೇ ಪರದಾಡುತ್ತಿರುವ ಸ್ಥಳೀಯ ಬೆಳೆಗಾರರು ತಮಗೆ ನ್ಯಾಯ ದೊರಕಿಸುವಂತೆ ಮೂಡಿಗೆರೆ ಪೊಲೀಸ್ ಠಾಣೆಗೆ ಆಗಮಿಸಿ ವೃತ್ತ ನಿರೀಕ್ಷಕ ಎಂ.ಜಗದೀಶ್ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡು ದೂರು ನೀಡಿದ್ದಾರೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News