ಕೂಲಿ ಕಾರ್ಮಿಕನ ಕುಟುಂಬವನ್ನು ಗೃಹಬಂಧನದಲ್ಲಿಟ್ಟು ಹಿಂಸೆ: ಆರೋಪ

Update: 2018-08-02 17:56 GMT

ಮೂಡಿಗೆರೆ, ಆ.2: ಕಾಫಿ ತೋಟದ ಮಾಲಿಕನೋರ್ವ ಕೂಲಿ ಕಾರ್ಮಿಕ ಮತ್ತು ಆತನ ಹೆಂಡತಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಲ್ಲೇ ಗೃಹ ಬಂಧನದಲ್ಲಿರಿಸಿದ್ದಾರೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಡಿಗೆರೆ ತತ್ಕೊಳ ವಾಸಿಯಾದ ಗೋಪಾಲ ಎಂಬ ಕಾರ್ಮಿಕ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಜೇನುಗದ್ದೆಯ ಮೀನುಪಾಲ್ ಎಂಬಲ್ಲಿರುವ ಕಾಫಿ ಎಸ್ಟೇಟಿಗೆ ಕಳೆದ 1 ವರ್ಷದಿಂದ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಿದ್ದು, ಈತ ಕಾರ್ಮಿಕನನ್ನು ಪೂರೈಸುವ ಮತ್ತೋರ್ವ ವ್ಯಕ್ತಿಯನ್ನು ಎಸ್ಟೇಟ್ ಮಾಲಕ ಪೀಟರ್ ಎಂಬವರಿಗೆ ಪರಿಚಯಿಸಿದ್ದ. ಆತ ಕಾಫಿ ಎಸ್ಟೇಟಿನ ಮಾಲಕ ಪೀಟರ್ ಅವರಿಂದ ಲಕ್ಷಂತರ ರೂ. ಹಣ ಪಡೆದು ನಾಪತ್ತೆಯಾಗಿದ್ದರಿಂದ, ಎಸ್ಟೇಟಿನ ಮಾಲಕ ಗೋಪಾಲನಿಗೆ ನೀನು ಕರೆದುಕೊಂಡು ಬಂದ ವ್ಯಕ್ತಿ ಹಣ ಪಡೆದು ಪರಾರಿಯಾಗಿದ್ದಾನೆ. ಅವನ ಬಾಕಿ ಹಣವನ್ನು ನೀನು ನಿನ್ನ ಹೆಂಡತಿ ಮಕ್ಕಳೊಂದಿಗೆ ದುಡಿದು ತೀರಿಸುವಂತೆ ಬೆದರಿಸಿದ್ದರು. ಇದಕ್ಕೆ ಗೋಪಾಲ ನನಗೂ ಆ ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾನೆಂದು ತಿಳಿದು ಬಂದಿದೆ. . 

2018 ರ ಜುಲೈ 16 ರಂದು ಮಾಲಕ ಪೀಟರ್ ಬಾಳೆಹೊನ್ನೂರಿನ ಪೊಲೀಸ್ ರೊಂದಿಗೆ ಮನೆಗೆ ಆಗಮಿಸಿ, ತನ್ನನ್ನು ಮತ್ತು ಹೆಂಡತಿ ಇಂದ್ರಳನ್ನು ಬಲವಂತವಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದು, ರಾತ್ರಿಯಿಡಿ ನಿರಂತರ ಹಲ್ಲೆ ನಡೆಸಿದ ಪೊಲೀಸರು ಕುಡಿಯಲು ಅನ್ನ ನೀರು ಕೊಡದೆ ಅಮಾನವಿಯ ರೀತಿಯಲ್ಲಿ ವರ್ತಿಸಿದ್ದಾರೆಂದು ಗೋಪಾಲ ಆರೋಪಿಸಿದ್ದಾನೆ.

ಮಾಲಕರಿಗೆ ಹಣ ಕೊಡದೆ ಇದ್ದರೆ ನೀವು ಸಾಯುವ ವರೆಗೂ ಅಲ್ಲೆ ಇರಬೇಕಾಗುತ್ತದೆ ಎಂದು ಬೆದರಿಕೆಯನ್ನು ಹಾಕಿ ಕೋಲು ಮತ್ತು ಬೂಟಿನಿಂದ ಬಾಳೆಹೊನ್ನೂರು ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ಮರುದಿನ ಜುಲೈ 17 ರಂದು ಸಂಜೆ ಎಸ್ಟೇಟಿಗೆ ಕರೆದುಕೊಂಡು ಹೋಗಿ ಎಸ್ಟೇಟಿನ ರೂಮಿನಲ್ಲಿ ತನ್ನನ್ನು ಮತ್ತು ಪತ್ನಿ ಇಂದ್ರರನ್ನು ಗೃಹ ಬಂಧನದಲ್ಲಿರಿಸಿದ್ದರು. ನಂತರ ರಾತ್ರಿ ಎಸ್ಟೇಟಿನ ರೂಮಿಗೆ ಬಂದ ಮಾಲಕ ಪೀಟರ್ ಮತ್ತು ಆತನ ಸ್ನೇಹಿತ ಸೇರಿಕೊಂಡು ತಮ್ಮನ್ನು ಮನ ಬಂದಂತೆ ತಳಿಸಿದ್ದಾರೆಂದು ಗೋಪಾಲ ಆರೋಪಿಸಿದ್ದಾರೆ.

ಮಾರನೆ ದಿನ ತನ್ನನ್ನು ಮಾಲಕ ಪೀಟರ್ ತನ್ನ ವಾಹನದಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿ ಹಾಸ್ಟೆಲ್‍ನಲ್ಲಿ ಓದುತ್ತಿದ್ದತನ್ನ ಎರಡು ಹೆಣ್ಣು ಮಕ್ಕಳನ್ನು ಕರೆದು ಕೊಂಡು ಬಂದು ಎಸ್ಟೇಟಿನ ರೂಮಿನಲ್ಲಿ ಒಟ್ಟಿಗೆ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ. ಅನ್ನಾಹಾರವನೂ ನೀಡದೇ ಜೀವನ ಪರ್ಯಂತ ದುಡಿದು ಕೊಂಡಿರುವಂತೆ ಬೆದರಿಕೆ ಹಾಕಿ, ತಪ್ಪಿಸಿಕೊಳ್ಳಲಾಗದಂತೆ ಪಹರೆಯನ್ನು ಹಾಕಿದ್ದರು ಎಂದು ಗೋಪಾಲ ಆರೋಪಿಸಿದ್ದಾರೆ.

ಜು.31 ರ ರಾತ್ರಿ ಗೃಹ ಬಂಧನದಿಂದ ತಪ್ಪಿಸಿಕೊಂಡು ಬಂದ ಕಾರ್ಮಿಕ ಗೋಪಾಲ, ಪೀಟರ್ ಬಳಿ ಗೃಹ ಬಂಧನದಲ್ಲಿದ್ದುಕೊಂಡು ದುಡಿಯುತ್ತಿರುವ ತನ್ನ ಮಕ್ಕಳು ಹಾಗೂ ಪತ್ನಿಯನ್ನು ಅಲ್ಲಿಂದ ಪಾರು ಮಾಡಬೇಕು. ನನ್ನ ಮತ್ತು ನನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ, ಎಸ್ಟೇಟ್‍ನಲ್ಲಿ ಕೂಡಿ ಹಾಕಿರುವ ಪೀಟರ್ ಮತ್ತವನ ಸ್ನೇಹಿತ ಹಾಗೂ ಬಾಳೆಹೊನ್ನುರಿನ ಪಿಎಸೈ ಮೇಲೆ ಕ್ರಮ ಜರುಗಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ಜಿಲ್ಲಾ ರಕ್ಷಾಣಧಿಕಾರಿಗಳಿಗೆ ಮತ್ತು ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ದೂರು ನೀಡಿ ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News