ಸ್ಮಾರ್ಟ್ ಫೋನ್ ಗಳಲ್ಲಿ ತಾನಾಗಿಯೇ ಕಾಣಿಸಿಕೊಂಡ ವಿಶಿಷ್ಟ ಗುರುತು ಪ್ರಾಧಿಕಾರದ ಹೆಲ್ಪ್ ಲೈನ್ ಸಂಖ್ಯೆ

Update: 2018-08-03 10:57 GMT

ಹೊಸದಿಲ್ಲಿ,ಆ.3 : ಶುಕ್ರವಾರ ತಮ್ಮ ಸ್ಮಾರ್ಟ್ ಫೋನ್ ನಲ್ಲಿ  ಭಾರತದ ವಿಶಿಷ್ಟ ಗುರುತು ಪ್ರಾಧಿಕಾರದ ಟೋಲ್ ಫ್ರೀ ಹೆಲ್ಪ್ ಲೈನ್ ಸಂಖ್ಯೆ ಡಿಫಾಲ್ಟ್ ಆಗಿ ಸೇವ್ ಆಗಿರುವುದು ನೋಡಿ ಸಾವಿರಾರು ಮಂದಿಗೆ ಆಘಾತವಾಗಿತ್ತು.

ವಿಶಿಷ್ಟ ಗುರುತು  ಪ್ರಾಧಿಕಾರ ತನ್ನ ಈ ಹಿಂದಿನ ಸಹಾಯವಾಣಿ ಸಂಖ್ಯೆ 1800-300-1947 ಅನ್ನು ಬದಲಾಯಿಸಿ 1947 ಮಾಡಿದೆ ಹಾಗೂ ಇದೇ ಸಂಖ್ಯೆ ಜನರ ಫೋನ್ ಬುಕ್ ಗಳಲ್ಲಿ ಸೇವ್ ಆಗಿದೆ. ಹಲವಾರು ಮಂದಿ ಈ ಸಂಖ್ಯೆ ತಮ್ಮ ಫೋನ್ ನಲ್ಲಿ ಇರುವುದನ್ನು ನೋಡಿ ಸ್ಕ್ರೀನ್ ಶಾಟ್ ನೊಂದಿಗೆ ಟ್ವೀಟ್ ಕೂಡ ಮಾಡಿದ್ದಾರೆ.

ಫ್ರೆಂಚ್ ಸೆಕ್ಯುರಿಟಿ ತಜ್ಞ ಇಲಿಯಟ್ ಆಲ್ಡರ್ಸನ್ ಈ ಬಗ್ಗೆ ಟ್ವೀಟ್ ಮಾಡಿ “ವಿವಿಧ ಟೆಲಿಕಾಂ ಸೇವಾ ಪೂರೈಕೆದಾರರ ಗ್ರಾಹಕರಾಗಿರುವ ಹಲವಾರು ಜನರು,  ಆಧಾರ್ ಇದ್ದವರೂ ಇಲ್ಲದವರೂ ಹಾಗೂ ಆಧಾರ್ ಆ್ಯಪ್ ಇನ್‍ಸ್ಟಾಲ್ ಮಾಡಿದವರೂ ಇಲ್ಲದವರೂ  ನಿಮ್ಮ ಫೋನ್ ಸಂಖ್ಯೆ ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿ ಡಿಫಾಲ್ಟ್ ಮೂಲಕ ಸೇವ್ ಆಗಿದೆ ಎಂಬುದನ್ನು ಗಮನಿಸಿದ್ದಾರೆ. ಇದಕ್ಕೆ ಕಾರಣ ನೀಡುವಿರಾ?,'' ಎಂದು ವಿಶಿಷ್ಟ ಗುರುತು ಪ್ರಾಧಿಕಾರವನ್ನು ಪ್ರಶ್ನಿಸಿದ್ದರು.

ಟ್ರಾಯ್ ಅಧ್ಯಕ್ಷ ಆರ್ ಎಸ್ ಶರ್ಮ ಅವರು ಇತ್ತೀಚೆಗೆ  ಟೀಕಾಕಾರರಿಗೆ ಹಾಗೂ ಹ್ಯಾಕರ್ ಗಳಿಗೆ ನೀಡಿದ ಬಹಿರಂಗ ಆಧಾರ್ ಸವಾಲಿನ ಹಿನ್ನೆಲೆಯಲ್ಲಿ ಇಂದಿನ ಬೆಳವಣಿಗೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ತಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಟ್ವಿಟ್ಟರ್ ನಲ್ಲಿ ಜುಲೈ 28ರಂದು ಶೇರ್ ಮಾಡಿ ಶರ್ಮ  ಕೋಲಾಹಲವನ್ನೇ ಸೃಷ್ಟಿಸಿದ್ದರು. ನಂತರ ಎಥಿಕಲ್ ಹ್ಯಾಕರ್ ಗಳು ಅವರ ಮೊಬೈಲ್ ಸಂಖ್ಯೆ, ಮನೆ ವಿಳಾಸ, ಜನನ ದಿನಾಂಕ, ಪ್ಯಾನ್ ಸಂಖ್ಯೆ ಹಾಗೂ ಮತದಾರರ ಗುರುತುಪತ್ರದ ಸಂಖ್ಯೆಯ ಮಾಹಿತಿ ಸೇರಿದಂತೆ ಕನಿಷ್ಠ 14 ವೈಯಕ್ತಿಕ ಮಾಹಿತಿಗಳನ್ನು ಒದಗಿಸಿದ್ದರು.

ವಿಶಿಷ್ಟ ಗುರುತು ಪ್ರಾಧಿಕಾರದಿಂದ ಸ್ಪಷ್ಟೀಕರಣ :

ತಾನು ಟೆಲಿಕಾಂ ಆಪರೇಟರುಗಳಿಗೆ, ಫೋನ್ ತಯಾರಕರಿಗೆ ಅಥವಾ ಗೂಗಲ್ ಗೆ  ತನ್ನ  ಹೆಲ್ಪ್ ಲೈನ್ ಸಂಖ್ಯೆಯನ್ನು ತನ್ನ ಐಡಿ ಕಾರ್ಡ್ ಯೋಜನೆಗಾಗಿ ಫೋನ್ ಗಳಲ್ಲಿ ಸೇರಿಸಲು ಸೂಚಿಸಿಲ್ಲ ಎಂದು ಪ್ರಾಧಿಕಾರ ಟ್ವೀಟ್ ಒಂದರ ಮುಖಾಂತರ ಸ್ಪಷ್ಟ ಪಡಿಸಿದೆ. “ಇಂದು ಫೋನ್ ಗಳಲ್ಲಿ ಕಂಡು ಬಂದಿರುವ ಸಂಖ್ಯೆ 18003001947  ಯುಐಡಿಎಐ ಅಧಿಕೃತ ಟೋಲ್ ಫ್ರೀ ಸಂಖ್ಯೆಯಲ್ಲ  ಕೆಲ ಸ್ಥಾಪಿತ ಹಿತಾಸಕ್ತಿಗಳು ಅನಗತ್ಯ  ಗೊಂದಲವೇರ್ಪಡಿಸಲು ಯತ್ನಿಸುತ್ತಿವೆ. ನಮ್ಮ ಅಧಿಕೃತ ಟೋಲ್ ಫ್ರೀ ಸಂಖ್ಯೆ  1947 ಆಗಿದ್ದು ಅದು ಕಳೆದ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಚಾಲ್ತಿಯಲ್ಲಿದೆ,'' ಎಂದು ಪ್ರಾಧಿಕಾರ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News