×
Ad

ಕೊಡಗಿನಲ್ಲಿ ಸಂಭ್ರಮದಿಂದ ಜರುಗಿದ 'ಕಕ್ಕಡ ಪದ್‍ನೆಟ್ಟ್' ನಮ್ಮೆ

Update: 2018-08-03 23:07 IST

ಮಡಿಕೇರಿ ಆ.3 : ಕೊಡಗಿನಲ್ಲಿ ಮಳೆಗಾಲದಲ್ಲಿ ಆಚರಿಸುವ ವಿಶೇಷ ಹಬ್ಬವಾದ ಕಕ್ಕಡ ಪದಿನೆಟ್ಟ್ (ಆಟಿ 18)ನ್ನು ಶುಕ್ರವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 

ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರಲ್ಲೂ ಹೆಚ್ಚಿನ ಸಡಗರ ಕಂಡು ಬಂದಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಬಹುತೇಕ ಪಟ್ಟಣಗಳಲ್ಲೂ ಶುಕ್ರವಾರ ಆಟಿ ಸೊಪ್ಪಿನ ಮಾರಾಟದ ಭರಾಟೆ ಜೋರಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಪಟ್ಟಣಗಳ ಮನೆಮನೆಗಳಲ್ಲೂ ಆಟಿ ಸೊಪ್ಪಿನಿಂದ ತಯಾರಿಸಿದ ಖಾದ್ಯಗಳ ಘಮಘಮ ಹರಡಿತ್ತು. 

ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ವತಿಯಿಂದ ಶುಕ್ರವಾರ ನಗರದ ಹೊರವಲಯದ ಕಡಗದಾಳು ಬಳಿಯ ಕ್ಯಾಪಿಟಲ್ ವಿಲೇಜ್‍ನಲ್ಲಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ 23ನೇ ವರ್ಷದ ಸಾರ್ವತ್ರಿಕ ‘ಕಕ್ಕಡ ಪದ್‍ನೆಟ್ಟ್ ನಮ್ಮೆ’ಯನ್ನು ಆಚರಿಸಲಾಯಿತು.

ಕ್ಯಾಪಿಟಲ್ ವಿಲೇಜ್‍ನ ಭತ್ತದ ಗದ್ದೆಯಲ್ಲಿ ನಾಟಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮದ್ದ್ ಪುಟ್ಟ್ ಮತ್ತು ಮದ್ದ್ ಪಾಯಸ ಹಾಗೂ ನಾಟಿ ಕೋಳಿಯ ಭಕ್ಷ್ಯವನ್ನು ಪ್ರಸಾದದಂತೆ ಸೇವಿಸಲಾಯಿತು.

ಈ ಸಂದರ್ಭ ನಡೆದ ಸಭೆಯಲ್ಲಿ ಕೊಡಗಿಗೆ ಕೇಂದ್ರಾಡಳಿತ ಪ್ರದೇಶ, ಸಂವಿಧಾನದ 244 ರೆ/ವಿ 6 ಮತ್ತು 8ನೇ ಶೆಡ್ಯೂಲ್ ಪ್ರಕಾರ ಕೊಡವ ಲ್ಯಾಂಡ್ ಸ್ವಾಯತ್ತತೆ ಹಕ್ಕೊತ್ತಾಯ–ಕೊಡವ ಸೂಕ್ಷ್ಮಾತಿ ಸೂಕ್ಷ್ಮಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ ಮತ್ತು ಕೊಡವತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕೆನ್ನುವ ಹಕ್ಕೊತ್ತಾಯದ ನಿರ್ಣಯವನ್ನು ಅಂಗೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಚಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಕೊಂಗೇಟಿರ ಲೋಕೇಶ್, ಪುಲ್ಲೇರ ಕಾಳಪ್ಪ, ಸ್ವಾತಿ ಕಾಳಪ್ಪ, ಮಣವಟ್ಟಿರ ಜಗದೀಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾ, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಪ್ಪಚ್ಚಿರ ರೀನಾ, ಅರಮಣಮಾಡ ರಂಜನ್, ಕುಲ್ಲೇಟಿರ ಬೇಬ ಅರುಣ, ಮಂದಪಂಡ ಮನೋಜ್, ಅಳಮಂಡ ಜೈ, ಪಟ್ಟಮಾಡ ಕುಶ, ಅಪ್ಪಾರಂಡ ಪ್ರಸಾದ್, ಮದ್ರಿರ ಕರುಂಬಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಣಿ, ಜಮ್ಮಡ ಮೋಹನ್, ಪುಳ್ಳಂಗಡ ನಟೇಶ್, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಅಪ್ಪೆಂಗಡ ಮಾಲೆ, ಕಿರಿಯಮಾಡ ಶರಿನ್, ಬೊಟ್ಟಂಗಡ ಸವಿತಾ,  ಅರೆಯಡ ಸವಿತಾ, ಅಜ್ಜೆಟ್ಟಿರ ರಾಣಿ, ಮಣವಟ್ಟಿರ ನಂದ, ಬಾಚಮಂಡ ಬೆಲ್ಲು, ಚಂಡಿರ ರಾಜ, ಐಲಪಂಡ ಮಿಟ್ಟು ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News