ಮನೆ ನಿರ್ಮಾಣಕ್ಕೆ ತಕರಾರು ಮಾಡಬೇಡಿ: ಸಚಿವ ಸಾ.ರಾ.ಮಹೇಶ್ ಸ್ಪಷ್ಟ ಸೂಚನೆ

Update: 2018-08-03 17:42 GMT

ಮಡಿಕೇರಿ ಆ.3: ಮಡಿಕೇರಿ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಮಾಡಲು ನಗರಾಭಿವೃದ್ಧಿ ಕೋಶದಿಂದ ಸಮಸ್ಯೆಯುಂಟಾಗುತ್ತಿದ್ದು, ಯಾವುದೇ ತಕರಾರಿಲ್ಲದೇ ಮನೆ ನಿರ್ಮಾಣ ಮಾಡಲು ಮುಂದಾಗುವವರಿಗೆ ಅನುಮತಿ ನೀಡಬೇಕೆಂದು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸ್ಪಷ್ಟ ಸೂಚನೆ ನೀಡಿದ್ದಾರೆ. 

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ ಸೇರಿದಂತೆ ಕೆಲವು ಅಧಿಕಾರಿಗಳು ಶಾಸಕರನ್ನೇ ನಿರ್ಲಕ್ಷಿಸಿ ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಉಸ್ತುವಾರಿ ಸಚಿವರ ಮೊದಲ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಮಡಿಕೇರಿಯಲ್ಲಿ ಮೊದಲ ಬಾರಿಗೆ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಪ್ರಗತಿ ಸಂಬಂಧಿತ ಪರಿಶೀಲನೆ ನಡೆಸಿದ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲಿನ ವಿವಿಧ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡರು. ಸಭೆಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಸಚಿವರಿಗೆ ಎಳೆ ಎಳೆಯಾಗಿ ತೆರೆದಿಟ್ಟರು. 

ಮಡಿಕೇರಿ ಸೇರಿದಂತೆ ಕೊಡಗಿನ ಹಲವೆಡೆ ಮನೆ ನಿರ್ಮಾಣ ಮಾಡಲು ಮುಂದಾಗುವವರಿಗೆ ನಗರಾಭಿವೃದ್ಧಿ ಇಲಾಖೆಯಿಂದ ಅನುಮತಿ ನೀಡಲಾಗುತ್ತಿಲ್ಲ. ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಕೆ.ಜಿ.ಬೋಪಯ್ಯ ಆರೋಪಿಸಿದಾಗ ಯೋಜನಾಧಿಕಾರಿ ಸೌಮ್ಯ ಅವರಿಂದ ಸಚಿವರು ಮಾಹಿತಿ ಪಡೆದರು. ಅಧಿಕಾರಿಯು ಮನೆದಳ ಮತ್ತು ಹಿತ್ತಲು ದಳದ ಬಗ್ಗೆ ಮಾಹಿತಿ ನೀಡತೊಡಗಿದಾಗ ಆಕ್ರೋಶಗೊಂಡ ಶಾಸಕ ಬೋಪಯ್ಯ ಜನರಿಗೆ ಏನೇನೋ ಇಲ್ಲದ ಕಾನೂನು ಹೇಳಿ ತೊಂದರೆ ಕೊಡಬೇಡಿ. ನಿಮಗೆ ಮನೆದಳ, ಹಿತ್ತಳ ದಳದ ಅರ್ಥ ತಿಳಿದಿದೆಯೇ ಎಂದು ಪ್ರಶ್ನಿಸಿದರು. ಮಡಿಕೇರಿ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಕೂಡ ಪ್ರತಿಕ್ರಿಯಿಸಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿಯೇ ಮನೆ ನಿರ್ಮಾಣ ಮಾಡಲು ಅನುಮತಿ ದೊರಕದೇ ಅನೇಕ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ ಎಂದು ದೂರಿದರು.

ಸಚಿವ ಸಾ.ರಾ.ಮಹೇಶ್ ಸರ್ಕಾರದ ಉನ್ನತಾಧಿಕಾರಿಗಳನ್ನು ಮೊಬೈಲ್ ನಲ್ಲಿ ಸಂಪರ್ಕಿಸಿ ಯಾವುದೇ ಸಮಸ್ಯೆ ಉಂಟು ಮಾಡದಂತೆ ಅಧಿಕಾರಿಗೆ ಸೂಚನೆ ನೀಡುವಂತೆ ಹೇಳಿದರು. 

ಸರ್ಕಾರದಿಂದ ಕೊಡಗು ಜಿಲ್ಲೆಯ ಅತಿವೃಷ್ಟಿ ಸಂಬಂಧಿತ ಅನುದಾನ ಬಿಡುಗಡೆ  ಮಾಡಲಾಗಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10 ಕೋಟಿ ರು. ಅನುದಾನ ಕೊಳೆಯುತ್ತಾ ಬಿದ್ದಿದೆ. ಪ್ರಕೃತಿ ವಿಕೋಪದಲ್ಲಿ ಸಮಸ್ಯೆಗೊಳಗಾದವರಿಗೆ ಅನುದಾನ ನೀಡಲು ವಿಳಂಬ ಮಾಡುತ್ತಿರುವುದೇಕೆ ಎಂದು ಕೆ.ಜಿ.ಬೋಪಯ್ಯ ಜಿಲ್ಲಾಧಿಕಾರಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಮಜಾಯಿಸಿಕೆ ನೀಡಲು ಜಿಲ್ಲಾಧಿಕಾರಿ ಶ್ರೀವಿದ್ಯಾ ಮುಂದಾದಾಗ, ಯಾರಿಗೆ ಒಂದು ರುಪಾಯಿಯಾದರೂ ಅನುದಾನ ನೀಡಿರುವ ಬಗ್ಗೆ ದಾಖಲೆ ನೀಡಿ ಎಂದು ಶಾಸಕ ಬೋಪಯ್ಯ ಪಟ್ಟು ಹಿಡಿದರು. 

ಕಳೆದ ನಾಲ್ಕು ವರ್ಷಗಳಿಂದ ಕೊಡಗಿನಲ್ಲಿ ರಸ್ತೆ, ಸೇತುವೆ ಸಂಬಂಧಿತ ಶಾಸಕರ ಅಧ್ಯಕ್ಷತೆಯಲ್ಲಿನ ಕಾರ್ಯಪಡೆಯ ಸಭೆಯನ್ನೇ ನಡೆಸಲಾಗಿಲ್ಲ. ಜಿಲ್ಲಾಧಿಕಾರಿಗಳು ಶಾಸಕರಿಗೆ ತಿಳಿಯದಂತೆ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಬೇಕಾಬಿಟ್ಟಿಯಾಗಿ ಕಾರ್ಯ ಯೋಜನೆಗಳು ಸರ್ಕಾರಕ್ಕೆ ರವಾನೆಯಾಗುತ್ತಿದೆ ಎಂದು ಬೋಪಯ್ಯ ಆಕ್ರೋಶ ಹೊರಹಾಕಿದರು. ಮುಖ್ಯಮಂತ್ರಿ ಸಭೆಯಲ್ಲಿಯೂ ಜಿಲ್ಲೆಯ ಅಧಿಕಾರಿಗಳು ಅದೇ ಉತ್ತರ ನೀಡುತ್ತಾರೆ. ಉಸ್ತುವಾರಿ ಸಚಿವರ ಸಭೆಯಲ್ಲಿಯೂ ಅದೇ ಉತ್ತರ ನೀಡುತ್ತಿದ್ದಾರೆ. ಒಬ್ಬರಿಗೂ ಪರಿಹಾರ ದೊರಕುತ್ತಿಲ್ಲ. ಇದೇನಾ ಆಡಳಿತ ವ್ಯವಸ್ಥೆ ಎಂದು ಶಾಸಕ ಬೋಪಯ್ಯ ಕಟುವಾಗಿ ಪ್ರಶ್ನಿಸಿದರು. ಎಲ್ಲವನ್ನೂ ಜಿಲ್ಲಾಧಿಕಾರಿಯೇ ನಡೆಸುವಾಗ ಶಾಸಕರಾಗಿ ನಾವೇಕೆ ಸಭೆಯಲ್ಲಿ ಇರಬೇಕು. ಹಣವನ್ನು ಸಮಸ್ಯೆ ಪರಿಹಾರಕ್ಕೆ ನೀಡದೇ ಖಜಾನೆಯಲ್ಲಿ ಇಟ್ಟುಕೊಂಡು ಕೂರುವುದೇಕೆ, ಹೀಗಾದರೆ ಸರ್ಕಾರ ಕೊಡಗಿಗೆ ಅತಿವೃಷ್ಟಿ ಪರಿಹಾರ ಸಂಬಂಧಿತ ಹೆಚ್ಚುವರಿ ಅನುದಾನ ಹೇಗೆ ನೀಡುತ್ತದೆ  ಎಂದು ಡಿಸಿ ವಿರುದ್ದ ಬೋಪಯ್ಯ ಕಿಡಿಕಾರಿದರು. 

ಸಚಿವ ಮಹೇಶ್, ಈ ಬಗ್ಗೆ ಪ್ರತಿಕ್ರಿಯಿಸಿ, ಶಾಸಕರನ್ನು ಗಣನೆಗೆ ತೆಗೆದುಕೊಳ್ಳದೇ ಅಧಿಕಾರಿಗಳು ಸರ್ಕಾರದೊಂದಿಗೆ ನೇರವಾಗಿ ಕೆಲವು ವಿಚಾರಗಳಲ್ಲಿ ವ್ಯವಹರಿಸುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. 

ಶಾಸಕ ಬೋಪಯ್ಯ ಆಕ್ರೋಶ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ವಿರುದ್ದವೂ ಸಿಡಿಯಿತು. ತಾಲೂಕು ಪಂಚಾಯತ್ ಅಧ್ಯಕ್ಷರಿಗೆ ಸಿಇಓ ಮರ್ಯಾದೆ ನೀಡುತ್ತಿಲ್ಲ. ತಾ.ಪಂ. ಅಧ್ಯಕ್ಷರು ಸಿಇಓ ಹೇಳಿದಂತೆ ಕೇಳಬೇಕಾ ಎಂದು ಪ್ರಶ್ನಿಸಿದಾಗ ಸಿಇಓ ಹೌದು ನಾನು ಹೇಳಿದಂತೆ ಅಧ್ಯಕ್ಷರು ಕೇಳಬೇಕೆಂದು ಉತ್ತರಿಸಿದ್ದು ಜನಪ್ರತಿನಿಧಿಗಳನ್ನು ಕೆರಳಿಸಿತು. ಇಂಥ ವರ್ತನೆ ಬಿಟ್ಟುಬಿಡಿ, ತಾಲೂಕು ಪಂಚಾಯತ್ ಸಿಬ್ಬಂದಿಗಳಷ್ಟೇ ಸರಕಾರಿ ನೌಕರರೇ ಹೊರತು ತಾಲೂಕು ಪಂಚಾಯತ್ ಪ್ರತಿನಿಧಿಗಳಲ್ಲ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಹಲವರಿಗೆ ಕೋವಿ ಲೈಸನ್ಸ್ ನವೀಕರಣ ಮಾಡಲು ಜಿಲ್ಲಾಧಿಕಾರಿ ಇಲ್ಲದ ತಕರಾರು ತೆಗೆಯುತ್ತಿದ್ದಾರೆ ಎಂಬ ಶಾಸಕ ಬೋಪಯ್ಯ ದೂರನ್ನು ಜಿಲ್ಲಾಧಿಕಾರಿ ನಿರಾಕರಿಸಿದ ಸಂದರ್ಭ ಶಾಸಕರು ಉದಾಹರಣೆ ಸಹಿತ ಗನ್ ಲೈಸನ್ಸ್ ನವೀಕರಣ ಮಾಡದಿರುವ ಪ್ರಕರಣವನ್ನು ಸಭೆಯ ಮುಂದಿಟ್ಟರು. ಗೃಹ ಕಾರ್ಯದರ್ಶಿಯಿಂದ ತಾನು ಆದೇಶ ತಂದರೂ ಆ ಆದೇಶಕ್ಕೂ ಡಿಸಿ ಬೆಲೆ ಕೊಡುತ್ತಿಲ್ಲ ಎಂದು ಬೋಪಯ್ಯ ಹೇಳಿದರು. 

ಮಡಿಕೇರಿಯಲ್ಲಿ ಯುಜಿಡಿ ಕಾಮಗಾರಿಯಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಶಾಸಕ ಬೋಪಯ್ಯ ಮತ್ತು ಸುನೀಲ್ ಸುಬ್ರಹ್ಮಣಿ ಸಚಿವರ ಗಮನಕ್ಕೆ ತಂದರು. ಮಡಿಕೇರಿಯ ರಸ್ತೆಗಳನ್ನೇ ಯುಜಿಡಿ ಕಾಮಗಾರಿ ಸರ್ವನಾಶ ಮಾಡಿದೆ ಎಂದೂ ಶಾಸಕದ್ವಯರು ದೂರಿದರು. ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತಾಧಿಕಾರಿಗಳ ಸಭೆ ಕರೆಯುವುದಾಗಿ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು. 

ಇನ್ನೂ ನೋಂದಣಿಯಾಗದ ಹೋಂಸ್ಟೇಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆಯೂ ಸಚಿವರು ಪ್ರವಾಸೋದ್ಯಮ ಇಲಾಖಾಧಿಕಾರಿಗೆ ಸೂಚಿಸಿದರು. ಜಿಲ್ಲೆಯಿಂದ ಯಾವುದೇ ಅಧಿಕಾರಿಯನ್ನು ತನ್ನ ಗಮನಕ್ಕೆ ತಾರದೇ ವರ್ಗಾಯಿಸದಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. 

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್,ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಪನ್ನೇಕರ್ ಸಭೆಯಲ್ಲಿ ಹಾಜರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News