ಚಿಕ್ಕಮಗಳೂರು: ಸತತ ಮುಳುಗಡೆಯಿಂದ ಶಿಥಿಲಾವಸ್ಥೆಯಲ್ಲಿ ಹೆಬ್ಬಾಳೆ ಸೇತುವೆ

Update: 2018-08-03 18:08 GMT

ಚಿಕ್ಕಮಗಳೂರು, ಆ.3: ಭದ್ರಾ ನದಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತುಂಬಿ ಹರಿದ ಪರಿಣಾಮ ಜಿಲ್ಲೆಯ ಕಳಸ ಹೋಬಳಿ ವ್ಯಾಪ್ತಿಯಲ್ಲಿರುವ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ಹಂತಕ್ಕೆ ತಲುಪಿದ್ದು, ಸೇತುವೆ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಯಾವುದೇ ಕ್ರಮವಹಿಸಿದ್ದರಿಂದ ಬೇಸತ್ತ ಹೊರನಾಡು ದೇವಾಲಯದ ಆಡಳಿತ ಮಂಡಳಿಯೇ ಸೇತುವೆ ದುರಸ್ತಿ ಮಾಡಿದ್ದು, ಇಲಾಖಾಧಿಕಾರಿಗಳ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯಾದ್ಯಂತ ಇತ್ತೀಚೆಗೆ ಭಾರೀ ಮಳೆ ಸುರಿದ ಪರಿಣಾಮ ಕಳಸ-ಹೊರನಾಡು ಮಧ್ಯೆ ಹರಿಯುವ ಭದ್ರಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೆಬ್ಬಾಳೆ ಸೇತುವೆ ಸತತ 8 ಬಾರೀ ಮುಳುಗಡೆಯಾಗಿತ್ತು. ಈ ಸೇತುವೆ ಪ್ರತೀ ವರ್ಷ ಮಳೆಗಾಲದಲ್ಲಿ ಭಾರೀ ಮಳೆಯಾದಲ್ಲಿ ನದಿ ನೀರಿನಲ್ಲಿ ಮುಳುಗಡೆಯಾಗುವುದು ಸಾಮಾನ್ಯವಾಗಿದ್ದು, ಸತತ ಮುಳುಗಡೆಯಿಂದಾಗಿ ಸೇತುವೆ ಭಾರೀ ಶಿಥಲಾವಸ್ಥೆಯ ಹಂತಕ್ಕೆ ತಲುಪಿದೆ.

ಸೇತುವೆ ಯಾವ ಮಟ್ಟಿಗೆ ಶಿಥಿಲಗೊಂಡಿದೆ ಎಂದರೆ ಕಳಸ ಮಾರ್ಗವಾಗಿ ರಾಜ್ಯದ ಮೂಲೆ ಮೂಲೆಯಿಂದ ಬರುವ ಪ್ರವಾಸಿಗರು ಈ ಸೇತುವೆ ಸ್ಥಿತಿ ಕಂಡು ವಾಹನ ಸಂಚಾರ ಮಾಡಲೂ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಎರಡೂ ಬದಿಗಳಲ್ಲಿನ ತಡೆಗೋಡೆಗಳ ಪೈಕಿ ಕೆಲ ಕೈಕಂಬಗಳು ಸತತವಾಗಿ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿವೆ. ಉಳಿದಿರುವ ತಡೆಗೋಡೆಗಳು ಮುರಿದು ಹೋಗಿ ಅಸ್ತಿಪಂಜರದಂತಾಗಿದೆ. ಸೇತುವೆ ಮೇಲ್ಭಾಗ ಸಂಪೂರ್ಣವಾಗಿ ನೀರಿನ ರಭಸಕ್ಕೆ ಸಿಕ್ಕಿ ಸೇತುವೆ ಉದ್ದಕ್ಕೂ ಹೊಂಡಗುಂಡಿಗಳು ತುಂಬಿಕೊಂಡಿವೆ. ಸೇತುವೆಗೆ ಹಾಕಲಾಗಿರುವ ಕಾಂಕ್ರೀಟು ಕಿತ್ತು ಬಂದಿದ್ದು, ಕಬ್ಬಿಣ ಸರಳುಗಳು ಮೇಲ್ಭಾಗದಲ್ಲಿ ಅಸ್ತಿಪಂಜರದಂತೆ ಕಾಣುತ್ತಿವೆ.

ಹೊರನಾಡು ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾಗಿದ್ದು, ಪ್ರತೀ ವರ್ಷ ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರನ್ನೇ ನಂಬಿ ಕಳಸ, ಹೊರನಾಡು, ಹಳುವಳ್ಳಿ ಮತ್ತಿತರ ಕಡೆಗಳಲ್ಲಿ ಸಾವಿರಾರು ಬಡ ವ್ಯಾಪಾರಿಗಳು, ಸ್ಥಳೀಯರು ಹೊಟೇಲ್, ಹೋಂಸ್ಟೇ ಮತ್ತಿತರ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಶಿಥಿಲಗೊಂಡಿರುವ ಹೆಬ್ಬಾಳೆ ಸೇತುವೆಯ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ರಾಜ್ಯಾದಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುವುದು ಕಡಿಮೆಯಾಗಿದ್ದು, ಸ್ಥಳೀಯ ವ್ಯಾಪಾರಿಗಳು ವ್ಯಾಪಾರವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಶಿಥಿಲಗೊಂಡಿರುವ ಸೇತುವೆಯ ದುರಸ್ತಿಗಾಗಿ ಸ್ಥಳೀಯರು ಅನೇಕಬಾರಿ ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಆದರೆ ಈ ಬಗ್ಗೆ ಇದುವರೆಗೂ ಯಾರೂ ಕ್ರಮವಹಿಸಿಲ್ಲ. ಲೋಕೋಪಯೋಗಿ ಇಲಾಖಾಧಿಕಾರಿಗಳಂತೂ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತಿದ್ದಾರೆಂದು ಹೆಬ್ಬಾಳೆಯ ವ್ಯಾಪಾರಿಗಳು ಆರೋಪಿಸಿದ್ದಾರೆ. 

ಸೇತುವೆ ದುರಸ್ತಿಗೆ ಸಂಬಂಧಿಸಿದ ಇಲಾಖಾಧಿಕಾರಿಗಳು ನಿರ್ಲಕ್ಷ್ಯವಹಿಸಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಹೊರನಾಡು ದೇವಾಲಯದ ಆಡಳಿತ ಮಂಡಳಿಯೇ ಸೇತುವೆಯನ್ನು ದುರಸ್ತಿಗೊಳಿಸಲು ಮುಂದಾಗಿದ್ದು, ಮಳೆ ಕಡಿಮೆಯಾದ ಬಳಿಕ ಹತ್ತಕ್ಕೂ ಹೆಚ್ಚು ಕಾರ್ಮಿಕರು ಸೇತುವೆಯ ಶಿಥಿಲಗೊಂಡ ಭಾಗಗಳನ್ನು ದುರಸ್ತಿಗೊಳಿಸಿದ್ದಾರೆ. 

ಸರಕಾರ ಮಾಡಬೇಕಿದ್ದ ಕೆಲಸವನ್ನು ದೇವಾಲಯದ ಆಡಳಿತ ಮಂಡಳಿ ಮಾಡಿರುವುದಕ್ಕೆ ಸ್ಥಳೀಯ ನಾಗರಿಕರು ವೆಚ್ಚುಗೆ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಇಲಾಖಾಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳೆ ಸೇತುವೆ ಪ್ರತೀ ವರ್ಷ ಮಳೆಗಾಲದಲ್ಲಿ ಭದ್ರಾನದಿ ತುಂಬಿ ಹರಿಯುವ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದೆ. ಈ ಭಾರಿ 8 ಬಾರಿ ಮುಳುಗಡೆಯಾಗಿದೆ. ನೀರಿನ ರಭಸಕ್ಕೆ ಸೇತುವೆ ಕೈಕಂಬಗಳು, ಕಾಂಕ್ರೀಟ್ ಕಿತ್ತು ಹೋಗಿದೆ. ಸೇತುವೆಯ ಕಬ್ಬಿಣದ ಸರಳುಗಳು ಎದ್ದು ಕಾಣುವಷ್ಟರಮಟ್ಟಿಗೆ ಸೇತುವೆ ಶಿಥಿಲಗೊಂಡಿದೆ. ಸೇತುವೆ ಶಿಥಿಲಗೊಂಡಿರುವುದರಿಂದ ಮಳೆಗಾಲದಲ್ಲಿ ಪ್ರವಾಸಿಗರು ಇತ್ತ ಬರಲು ಹೆದರುತ್ತಿದ್ದಾರೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇಲಾಖಾಧಿಕಾರಿಗಳು ಈ ಬಗ್ಗೆ ಕಂಡೂ ಕಾಣದಂತಿದ್ದಾರೆ.
- ಟಿಟ್ಟು ಥಾಮಸ್, ವ್ಯಾಪಾರಿ , ಕಳಸ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News