ಜ.ಕಾ.ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ಭದ್ರತಾ ಲೋಪ

Update: 2018-08-04 08:18 GMT

ಶ್ರೀನಗರ, ಆ.4: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ನಿವಾಸದಲ್ಲಿ ಇಂದು ಭಾರೀ ಭದ್ರತಾ ಲೋಪ ಕಂಡುಬಂದಿದೆ. ಬಲವಂತವಾಗಿ ಅಬ್ದುಲ್ಲಾರ ಮನೆಗೆ ಕಾರು ನುಗ್ಗಿಸಲು ಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ.

   ಅಬ್ದುಲ್ಲಾರಿಗೆ ಝೆಡ್-ಪ್ಲಸ್ ಕೆಟಗರಿಯ ಭದ್ರತೆ ನೀಡಲಾಗುತ್ತಿದ್ದು, ಘಟನೆಯ ವೇಳೆ ಅಬ್ದುಲ್ಲಾ ಮನೆಯಲ್ಲಿರಲಿಲ್ಲ. ಘಟನೆಯಲ್ಲಿ ಓರ್ವ ಭದ್ರತಾ ಅಧಿಕಾರಿಗೆ ಗಾಯವಾಗಿದೆ.

ವ್ಯಕ್ತಿಯೊಬ್ಬ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಅಬ್ದುಲ್ಲಾರ ಜಮ್ಮುವಿನ ಭಟಿಂಡಿ ಪ್ರದೇಶದಲ್ಲಿರುವ ನಿವಾಸಕ್ಕೆ ನುಗ್ಗಿಸಲು ಯತ್ನಿಸಿದ್ದಾನೆ. ಆ ನಂತರ ವಾಹನದಿಂದ ಕೆಳಗಿಳಿದ ವ್ಯಕ್ತಿ ಅಬ್ದುಲ್ಲಾರ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾನೆ. ತಕ್ಷಣವೇ ಎಚ್ಚೆತ್ತ ಸಿಆರ್‌ಪಿಎಫ್ ಅಧಿಕಾರಿಗಳು ಯುವಕನನ್ನು ಸಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ವಿವೇಕ್ ಗುಪ್ತಾ ಹೇಳಿದ್ದಾರೆ.

ವ್ಯಕ್ತಿಯ ಬಳಿಯಿದ್ದ ಆಧಾರ್ ಕಾರ್ಡ್ ಮೂಲಕ ಆತ ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯವನು ಎಂದು ಗೊತ್ತಾಗಿದೆ. ಡ್ರಗ್ ವ್ಯಸನಿಯಾಗಿದ್ದ ಈತನಿಗೆ ಭಯೋತ್ಪಾದಕ ನಂಟಿರಲಿಲ್ಲ ಎಂದು ಅಂಶವೂ ತಿಳಿದುಬಂದಿದೆ. ಈತನ ಕುಟುಂಬ ಸದಸ್ಯರು ಜಮ್ಮುವಿನಲ್ಲಿ ವಾಸಿಸುತ್ತಿದ್ದಾರೆ. ಶ್ರೀನಗರದ ಲೋಕಸಭಾ ಸದಸ್ಯರಾಗಿರುವ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಪ್ರಸ್ತುತ ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಹೊಸದಿಲ್ಲಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News