‘ಲೋಕಸಭಾ ಚುನಾವಣೆ ಮೈತ್ರಿ' ತೀರ್ಮಾನವಾಗಿಲ್ಲ: ದಿನೇಶ್‌ ಗುಂಡೂರಾವ್

Update: 2018-08-04 14:57 GMT

ಬೆಂಗಳೂರು, ಆ.4: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ತೀರ್ಮಾನವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಸಮನ್ವಯ ಸಮಿತಿಯಲ್ಲಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆ.13ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಆಯೋಜಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ 7 ಲೋಕಸಭಾ ಕ್ಷೇತ್ರಗಳ ಸ್ಥಳೀಯ ಮುಖಂಡರ ಜೊತೆ ಪಕ್ಷ ಸಂಘಟನೆ, ವಿಧಾನಸಭೆ ಚುನಾವಣೆಯಲ್ಲಿ ಆದ ಸೋಲು ಗೆಲುವುಗಳಿಗೆ ಕಾರಣವಾದ ಅಂಶಗಳ ಕುರಿತು ಸಮಾಲೋಚನೆ ನಡೆಸಿದ್ದೇವೆ. ಇನ್ನುಳಿದ 21 ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಮುಂದಿನ ವಾರ ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕಷ್ಟ. ಈ ಸಂಬಂಧ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೊತೆ ಚರ್ಚಿಸುತ್ತೇವೆ. ನಮ್ಮ ತೀರ್ಮಾನದಿಂದ ಸರಕಾರಕ್ಕೆ ಮುಜುಗರವಾಗಬಾರದು. ಪರಮೇಶ್ವರ್ ಜೊತೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಯೂ ಮಾತುಕತೆ ನಡೆಸಬೇಕು. ದೇವೇಗೌಡರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಂಬಂಧ ಮುಂದಿನ ವಾರ ಜಿಲ್ಲಾವಾರು ಮುಖಂಡರ ಸಭೆಗಳನ್ನು ಮಾಡುತ್ತೇವೆ. ಬೂತ್ ಹಾಗೂ ಬ್ಲಾಕ್ ಮಟ್ಟದ ಸಮಿತಿಗಳನ್ನು ಕ್ರಿಯಾಶೀಲವಾಗಬೇಕು. ಪಕ್ಷ ಸಂಘಟನೆಯಲ್ಲಿ ಕ್ರಿಯಾಶೀಲರಾಗಿರುವವರಿಗೆ ಜವಾಬ್ದಾರಿ ನೀಡುತ್ತೇವೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು. ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳುವಾಗ ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಸ್ಥಳೀಯ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಬೇಕು. ಈ ಸಂಬಂಧ ಎಲ್ಲ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಆಷಾಢ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದ್ದೇವೆ. ಆ.15ರ ನಂತರ ಹೊಸದಿಲ್ಲಿಗೆ ತೆರಳಿ ರಾಹುಲ್‌ ಗಾಂಧಿ ಜೊತೆ ಚರ್ಚೆ ನಡೆಸಿ, ಶೀಘ್ರವೇ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದರು. ಸಮನ್ವಯ ಸಮಿತಿಯಲ್ಲಿ ಸಹಜವಾಗಿಯೇ ಉಭಯ ಪಕ್ಷಗಳ ಅಧ್ಯಕ್ಷರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನನ್ನನ್ನು ಸಮನ್ವಯ ಸಮಿತಿಗೆ ಸೇರ್ಪಡೆ ಮಾಡುವ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ದಿನೇಶ್‌ ಗುಂಡೂರಾವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವೇಗೌಡ-ದಿನೇಶ್‌ಗುಂಡೂರಾವ್ ಭೇಟಿ
ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ. ಇಂದು ಅವರನ್ನು ಸೌಜನ್ಯದ ಭೇಟಿಯಾಗಿದ್ದೇನೆ. ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಮೈತ್ರಿ ವಿಚಾರದ ಕುರಿತು ಈ ಸಂದರ್ಭದಲ್ಲಿ ಯಾವುದೆ ಚರ್ಚೆ ನಡೆಸಿಲ್ಲ.
-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News