ರಸ್ತೆ ವಿಸ್ತರಣೆಗೆ ದರ್ಗಾ ತೆರವು: ಶಿಕಾರಿಪುರದಲ್ಲಿ ಬಿಗುವಿನ ವಾತಾವರಣ

Update: 2018-08-04 15:27 GMT

ಶಿವಮೊಗ್ಗ, ಆ. 4: ರಸ್ತೆ ಅಗಲೀಕರಣಕ್ಕಾಗಿ ದರ್ಗಾ ಕಟ್ಟಡ ತೆರವುಗೊಳಿಸಿದ್ದರಿಂದ ಜಿಲ್ಲೆಯ ಶಿಕಾರಿಪುರ ಪಟ್ಟಣದ ಸೊಸೈಟಿ ಕೇರಿಯ ರಂಗನಾಥಪುರ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ಬಿಗುವಿನ ವಾತಾವರಣ ಉಂಟಾಗಿತ್ತು. 

ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದು, ಕಟ್ಟಡ ತೆರವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ, ಘೋಷಣೆ ಕೂಗಿದರು. ಇದರಿಂದ ಬಿಗುವಿನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ನೆರೆದಿದ್ದವರನ್ನು ಚದುರಿಸಿದರು. 

ಮುನ್ನೆಚ್ಚರಿಕೆ ಕ್ರಮವಾಗಿ ಶಿಕಾರಿಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. 

ತೆರವು: ಶಿಕಾರಿಪುರ-ಆನಂದಪುರ ನಡುವಿನ ರಸ್ತೆ ಅಗಲೀಕರಣ ನಡೆಸಲಾಗುತ್ತಿದೆ. ಈ ಕಾರಣದಿಂದ ರಂಗನಾಥಪುರ ಪ್ರದೇಶದಲ್ಲಿ ಹಳೆಯ ದರ್ಗಾ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ನಿರ್ಧರಿಸಿದ್ದರು. ಈ ಕುರಿತಂತೆ ಸಂಬಂಧಿಸಿದವರಿಗೆ ಸೂಚನೆ ಕೂಡ ನೀಡಿದ್ದರು.

ಹಲವು ದಶಕಗಳಿಂದ ಈ ದರ್ಗಾವಿದ್ದು, ಇದನ್ನು ತೆರವುಗೊಳಿಸಬಾರದು. ದರ್ಗಾ ಉಳಿಸಿಕೊಂಡು ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ಅಧಿಕಾರಿಗಳು ಒಪ್ಪಿರಲಿಲ್ಲ. ಈ ನಡುವೆ ಶನಿವಾರ ಬೆಳಿಗ್ಗೆ ದಿಢೀರ್ ಆಗಿ ದರ್ಗಾ ತೆರವು ಕಾರ್ಯಾಚರಣೆಯನ್ನು ಬಿಗಿ ಪೊಲೀಸ್ ಪಹರೆಯೊಂದಿಗೆ ಅಧಿಕಾರಿಗಳು ನಡೆಸಿದ್ದಾರೆ. ಇದಕ್ಕೆ ಮುಸ್ಲಿಂ ಸಮುದಾಯದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News