ಚಿಕ್ಕಮಗಳೂರು: ಆ.06 ರಂದು ಬ್ಯಾರಿ ಒಕ್ಕೂಟದಿಂದ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ
ಚಿಕ್ಕಮಗಳೂರು, ಆ.4: ಜಿಲ್ಲಾ ಬ್ಯಾರಿಗಳ ಒಕ್ಕೂಟ ಮಂಗಳೂರಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸನ್ಮಾನ ಸಮಾರಂಭವನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮುಹಮದ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ಯಾರಿ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಾಜ್ಯದಾದ್ಯಂತ ಸಾರುವ ಹಾಗೂ ಬ್ಯಾರಿ ಬಾಷೆಯನ್ನು ಉಳಿಸಿ ಪೋಷಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪಿಸಲು ನೆರವಾಗಿದ್ದ ಜನಪ್ರತಿನಿಧಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಡಗು, ಹಾಸನ, ಉಡುಪಿ, ಮಂಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಬ್ಯಾರಿ ಸಮುದಾಯದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆಂದು ಅವರು ಹೇಳಿದ್ದಾರೆ.
ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ಹಾಗೂ ಸಭಾ ಕಾರ್ಯಕ್ರಮದ ನಂತರ ಸತೀಶ್ ಸುರತ್ಕಲ್ ಹಾಗೂ ಅಶ್ರಫ್ ಅಪೋಲೋ ಬಳಗದಿಂದ ಬ್ಯಾರಿ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೆ.ಮುಹಮದ್ ವಹಿಸಲಿದ್ದು, ಎಸ್.ಎಲ್.ಧರ್ಮೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಟಿ.ಡಿ.ರಾಜೇಗೌಡ ರವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಅದ್ಯಕ್ಷರಾದ ಸಿ.ಕೆ.ಇಬ್ರಾಹಿಂರವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.