ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರ ಡಿಪಿಆರ್: ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು, ಆ.5: ಬೆಂಗಳೂರಿನ ಕೃಷ್ಣ ಜಲಭಾಗ್ಯ ನಿಗಮದ ಎಮ್‍ಡಿ ಮಲ್ಲಿಕಾರ್ಜುನ್ ಗುಂಗೆ ಮತ್ತು ಇಂಜಿನಿಯರ್ ಕುಲಕರ್ಣಿ ಅವರು ಆ.2ರಂದು ಚಿಕ್ಕಮಗಳೂರು ಜಿಲ್ಲೆಯ ಮದಗರ ಕೆರೆ ಮತ್ತು ಐಯ್ಯನ ಕೆರೆ ಸೇರಿದಂತೆ 63 ಕೆರೆಗಳಿಗೆ ನೀರು ತುಂಬಿಸುವ ಪವರ್ ಪಾಯಿಂಟ್ ಪ್ರೆಸೆಂಟೇಶನ್ ತೋರಿಸಿದ್ದು, ಯೋಜನೆ ಜಾರಿಗೆ ಶೀಘ್ರ ಡಿಪಿಆರ್ ತಯಾರಾಗಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯಿಂದ ಒಂದುಕಾಲು ಟಿ.ಎಂ.ಸಿ ನೀರನ್ನು ತರೀಕೆರೆ ತಾಲೂಕಿನ ಕರಕುಚ್ಚಿಯ ಗೊಂದಿ ಗ್ರಾಮದಲ್ಲಿ ಜಾಕ್‍ವಿಲ್ ಕಟ್ಟಿ ಕಡೂರಿನ ದೇವಲಕೆರೆಗೆ ನೀರು ಹರಿಸಲಾಗುತ್ತದೆ. ದೇವಲಕೆರೆಯಿಂದ ಮದಗದ ಕೆರೆ, ಐಯ್ಯನ ಕೆರೆಗೆ ಅನುಕೂಲವಾಗುವ ರೀತಿಯಲ್ಲಿ ಚಿಕ್ಕರಂಗನಬೆಟ್ಟ ಸಮೀಪದ ಸರಣಿ ಕೆರೆಗಳಿಗೆ ನೀರು ತುಂಬಿಸಲಾಗುವುದು. ಚಿಕ್ಕರಂಗನಬೆಟ್ಟದಿಂದ ತಂಗಲಿಗೆ ನೀರು ಹರಿಸಿ ಅಲ್ಲಿಯ ಕೆರೆಗಳನ್ನು ತುಂಬಿಸಲಾಗುವುದು. ತಂಗಲಿಯಿಂದ ಕಳಸಪುರ, ಬೆಳವಾಡಿ ದೇವನೂರು, ನಿಡಘಟ್ಟ ಈ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನಯ ಬಗ್ಗೆ ಪವರ್ ಪ್ರಾಜೆಕ್ಟ್ ನಲ್ಲಿ ತೋರಿಸಲಾಗಿದೆ ಎಂದರು.
ಈ ಕಾಮಗಾರಿ ಸಂಬಂಧ ಶೀಘ್ರ ಡಿಪಿಆರ್ ತಯಾರಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದು, ಸರಕಾರ ಈ ಯೋಜನೆಯನ್ನು ಶೀಘ್ರ ಜಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದ ಅವರು, ಜಿಲ್ಲೆ ಬರದಿಂದ ತತ್ತರಿಸಿದ್ದು. ಜಿಲ್ಲೆಯಲ್ಲಿ ಐದು ನದಿಗಳು ಹುಟ್ಟಿದರೂ ಆ ನದಿಗಳ ನೀರು ಜಿಲ್ಲೆಯ ಜನರಿಗೆ ಸಿಗುತ್ತಿಲ್ಲ ಎಂಬ ಕೊರಗು ಜಿಲ್ಲೆಯ ಜನರಲ್ಲಿದೆ. ಆದ್ದರಿಂದ ಬಯಲು ಸೀಮೆ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರ ಜಾರಿ ಮಾಡಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಜಿಲ್ಲೆಯ ಈ ಹಿಂದಿನ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿಲ್ಲ. ಸಮ್ಮಿಶ್ರ ಸರಕರದ ನೂತನ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಶೀಘ್ರ ಕಾಯಕಲ್ಪ ಕಲ್ಪಿಸಬೇಕೆಂದ ಶಾಸಕ ರವಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ.ಜಾರ್ಜ್‍ರವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಈ ಹಿಂದಿನ ಉಸ್ತುವಾರಿ ಸಚಿವರು ಸ್ವತಂತ್ರ ದಿನಾಚರಣೆ, ಕೆಡಿಪಿ ಸಭೆಗಳಿಗೆ ಮಾತ್ರ ಸೀಮಿತವಾಗಿದ್ದರು. ಹಿಂದಿನ ಸಚಿವರುಗಳಂತೆ ನೂತನ ಉಸ್ತುವಾರಿ ಸಚಿವರ ಜಾರ್ಜ್ ಕೇವಲ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕಷ್ಟೇ ಸೀಮಿತವಾಗಿರದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಿ ಎಂದರು.
ಜಿಲ್ಲಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆ, ಜೀವ ಹಾನಿಯಾಗಿದೆ. ಇದಕ್ಕೆ ವಿಶೇಷ ಅನುದಾನ ನೀಡುವಂತೆ ಸರಕಾರದ ಮೇಲೆ ಒತ್ತಡ ತರಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಗೆ ವಿಶೇಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಅವರು ಬಜೆಟ್‍ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಯನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿವ ಅವರು ಜಿಲ್ಲೆಗೆ ವಿಶೇಷ ಅನುದಾನ ನೀಡುತ್ತಾರೆಂದು ನಂಬಿದ್ದೇನೆ. ಅವರು ಭರವಸೆ ನೀಡಿದಂತೆ ವಿಶೇಷ ಅನುದಾನ ಸಂಬಂಧ ಇನ್ನು 15ದಿನ ಕಾದುನೋಡಿ ನಂತರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.
ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಪಕ್ಷದಿಂದ ಆ.9ರಿಂದ ಮೂರು ತಂಡಗಳು ರಾಜ್ಯ ಪ್ರವಾಸ ಹಮ್ಮಿಕೊಳ್ಳಲಿವೆ. ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪರವರ ನೇತೃತ್ವದಲ್ಲಿ ಈ ಮೂರು ತಂಡಗಳು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ಮತ್ತು ಲೋಕಸಭಾ ಚುನಾವಣೆಗಳಿಗೆ ಪೂರ್ವ ತಯಾರಿ ನಡೆಸಲು ಬಿಜೆಪಿ ಸಿದ್ಧತೆ ಮಾಡಲಿದೆ.
- ಸಿ.ಟಿ.ರವಿ, ಶಾಸಕಬಿಜೆಪಿ ಕಾರ್ಯಕರ್ತ ಮುಹಮ್ಮದ್ ಅನ್ವರ್ ಅವರ ಸಾವಿನ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದ್ದರಿಂದ ಈ ಬಗ್ಗೆ ಯಾವುದೇ ಗೊಂದಲ ಸೃಷ್ಟಿಗೆ ತಾವು ಮುಂದಾಗಲಿಲ್ಲ. ಆದರೆ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸರಕಾರಿ ಕಾರ್ಯ ನಿಮಿತ್ತ ಮಾನಸ ಸರೋವರಕ್ಕೆ ತೆರಳಿದ್ದಾರೆ. ಇದರಿಂದ ತನಿಖೆ ವಿಳಂಬವಾಗುತ್ತಿದೆ. ಅನ್ವರ್ ಹತ್ಯೆ ಆರೋಪಿಗಳ ಶೀಘ್ರ ಬಂಧನಕ್ಕೆ ಪಕ್ಷದ ವತಿಯಿಂದ ಸರಕಾರದ ಮೇಲೆ ಎಲ್ಲ ರೀತಿಯ ಒತ್ತಡ ಹಾಕಲಾಗುವುದು.
- ಸಿ.ಟಿ.ರವಿ, ಶಾಸಕ